Thursday, July 26, 2018

#Kargil_Vijay_Diwas: ಪಾಕ್ ಗೆ ಪಾಠ ಕಲಿಸಿದ ದಿನ ಇಂದು, ಈ ಸಂದರ್ಭದಲ್ಲಿ #ಅಟಲ್_ಬಿಹಾರಿ_ವಾಜಪೇಯ್ ರನ್ನ ನೆನೆಯದೆ ಇರಲು ಸಾಧ್ಯವೇ?


ದೇಶ ಇಂದು ಸಂಭ್ರಮದಿಂದ ‘ಕಾರ್ಗಿಲ್ ವಿಜಯ ದಿವಸ’ ಆಚರಿಸುತ್ತಿದೆ.. ನಮ್ಮ ಹೆಮ್ಮೆಯ ಯೋಧರಿಗೆ ದೇಶವೇ ಗೌರವ ಸೂಚಿಸುತ್ತಿದೆ.. ಆದರೆ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳದಿದ್ದರೆ ಸಂಭ್ರಮಾಚರಣೆಗೆ ಅರ್ಥವಿರುವುದಿಲ್ಲ… ಆಗ ತಾನೆ ಅಧಿಕಾರಕ್ಕೆ ಬಂದಿದ್ದ ಅಟಲ್ ಸರ್ಕಾರ ಪಾಕಿಸ್ತಾನದ ಜೊತೆ ಎಲ್ಲಾ ಸರ್ಕಾರಗಳಂತೆ ಸ್ನೇಹ ಹಸ್ತ ಚಾಚಿದ್ದರು. ಒಂದು ಹೆಜ್ಜೆ ಮುಂದೆಯೂ ಹೋಗಿ ಲಾಹೋರ್ ಗೆ ಬಸ್ ಯಾತ್ರೆಯನ್ನು ಕೈಗೊಂಡರು. ಎರಡೂ ದೇಶಗಳ ಸ್ನೇಹದ ಹೊಸ ಮನ್ವಂತರ ಎಂದೇ ಇದನ್ನ ಭಾವಿಸಲಾಗಿತ್ತು.

ಆದರೆ ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್ ಶರೀಫ್ ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಗಡಿಭಾಗದಲ್ಲಿ ತನ್ನ ಸೇನೆಯನ್ನು ಜಮಾಗೊಳಿಸಿ, ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿತ್ತು. ಸ್ನೇಹ ಹಸ್ತ ಚಾಚುತ್ತಾ ಭಾರತ ಎಲ್ಲೋ ಒಂದು ಬದಿಯಲ್ಲಿ ಪಾಕಿಸ್ತಾನವನ್ನ ನಂಬಿ ಮೈಮರೆತಿತ್ತು.

 ಸೇನೆಯಲ್ಲಿ ಯುದ್ಧಕ್ಕೆ ಬೇಕಾದ ಸಾಮಾಗ್ರಿ, ಬಂದೂಕುಗಳು, ಗುಂಡುಗಳೆಲ್ಲಾ ಕಳಪೆಯಾಗಿತ್ತು. ಹೋಗಲಿ ಯೋಧರುಗಳಿಗೆ ಊಟವನ್ನ ಗಡಿ ಭಾಗಕ್ಕೆ ತೆಗೆದುಕೊಂಡು ಹೋಗಲು ಬೇಕಾದ ರಸ್ತೆಗಳು ಕೂಡ ಸರಿಯಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಸೇನೆಗೆ ಸ್ಪೂರ್ತಿ ತುಂಬಲು ನಿಂತರು ವಾಜಪೇಯಿ.. ವಾಜಪೇಯಿ ಸರ್ಕಾರದ ವೈಫಲ್ಯವಿದು ಅಂತಾ ಸರ್ಕಾರದ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದವು. ಕೆಲವೊಂದಷ್ಟು ಜನ ಇನ್ನೂ ಮುಂದಕ್ಕೆ ಹೋಗಿ ಕಾಶ್ಮೀರವನ್ನ ಪಾಕಿಸ್ತಾನಕ್ಕೆ ಕೊಟ್ಟು ಬಿಡಿ ಎಂದರೂ, ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ರಾಜಿನಾಮೆ ನೀಡಬೇಕೆಂದು ಮತ್ತೊಂದಷ್ಟು ಜನ ಒತ್ತಾಯಿಸತೊಡಗಿದರು. ಆದರೂ ಯಾವುದಕ್ಕೂ ಬಗ್ಗದೇ ಸೇನೆಗೆ ವಾಜಪೇಯಿ ಶಕ್ತಿ ತುಂಬಿದರು.

ಪ್ರಧಾನಿಯ ಆದೇಶ ಬಂದ ತಕ್ಷಣ ಸೇನೆ ತನ್ನ ಕಾರ್ಯಾಚರಣೆಯನ್ನು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಪ್ರಾರಂಭಿಸಿತು. ಇತ್ತ ಉಕ್ಕಿನ ಮನುಷ್ಯ ಅಡ್ವಾಣಿ ತಕ್ಷಣವೇ ಇಸ್ರೇಲ್ ಗೆ ತೆರಳಿದರು. ಮದ್ದುಗುಂಡು ಹಾಗು ಅಗತ್ಯ ಸೇನಾ ನೆರವನ್ನು ತೆಗೆದುಕೊಂಡು ಬಂದರು. ವಾಜಪೇಯಿ ರಕ್ಷಣಾ ಸಚಿವ ಜಾರ್ಜ್ ರನ್ನ ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ಕಳುಹಿಸಿ, ಪರಿಸ್ಥಿತಿಯ ಅವಲೋಕನ ನಡೆಸಲು ಸೂಚಿಸಿದರು. ಅತ್ಯಂತ ಕೆಟ್ಟ ಹವಾಮಾನ, ಕೈಯಲ್ಲಿರುವ ಕಳಪೆ ಸಾಮಾಗ್ರಿಗಳು, ವೈರಿಪಡೆಯ ಅತ್ಯಾಧುನಿಕ ಆಯುಧಗಳೊಂದಿಗೆ ನಮ್ಮ ಸೇನೆ ಧೃತಿಗೆಡದೆ ಹೋರಾಟ ನಡೆಸುತ್ತಾ ಒಂದೊಂದೇ ಸ್ಥಳವನ್ನು ವಾಪಸ್ಸು ಪಡೆಯಿತು. ೭೪ ದಿನಗಳ ಕಾಲ ನಡೆದ ಯುದ್ಧದಲ್ಲಿ ದಿನಕ್ಕೆ ೧೫ ಕೋಟಿಯಂತೆ ಸುಮಾರು ೧೧೦೦ ಕೋಟಿಗಳಷ್ಟು ಹಣ ವ್ಯಯಿಸಲಾಗಿತ್ತು. ಖರ್ಚಾದ ಹಣವಿರಲಿ, ಆದರೆ ದೇಶ ಅದೆಷ್ಟೋ ಯುವ ಸೇನಾನಿಗಳನ್ನ ಕಳೆದುಕೊಂಡಿತ್ತು. ನಮ್ಮವರು ೫೨೭, ಪಾಕಿಸ್ತಾನದವರು ೬೯೬ ಜನ ಸಾವಿಗೀಡಾದರು.

ಒಂದು ವಿಷಯ ನೆನಪಿರಲಿ. ದೇಶ ಅದೆಷ್ಟೋ ಯುದ್ಧಗಳನ್ನ ಕಂಡಿದೆ. ಅದೆಷ್ಟೋ ಪ್ರಧಾನಿಗಳನ್ನ ಖಂಡಿದೆ. ಆದರೆ ಸ್ವತಃ ಯುದ್ಧರಂಗಕ್ಕೆ ಹೋಗಿ ಸ್ಫೂರ್ತಿ ತುಂಬಿದ ಪ್ರಧಾನಿ ವಾಜಪೇಯಿಯೊಬ್ಬರೆ. ನೆಹರೂರವರು ಒಮ್ಮೆ ಒಂದು ಮಾತನ್ನ ಹೇಳಿದ್ದರು, ಒಂದಿಚ್ಚೂ ಹುಲ್ಲೂ ಬೆಳೆಯಲು ಬಾರದ ಜಾಗ ಬೇಕಾದರೆ ನೆರೆ ರಾಷ್ಟ್ರ ತೆಗೆದುಕೊಂಡು ಹೋಗಲಿ ಅಂತಾ. ಬಹುಶಃ ಅಟಲರು ಅದೇ ಕೆಲಸವನ್ನು ಮಾಡಿದ್ದರೆ ಇಂದು ‘ಭಾರತ ರತ್ನ’ ಎನಿಸಿಕೊಳ್ಳುತ್ತಿರಲಿಲ್ಲ. ಸೇನೆಯ ಸಂಪೂರ್ಣ ಚಿತ್ರಣ ಅಟಲರಿಗೆ ಗೊತ್ತಿತ್ತು. ಆದರೂ ಸೇನೆಯ ಆತ್ಮ ಸ್ಥೈರ್ಯ ಹೆಚ್ಚಿಸುವ ಜವಾಬ್ದಾರಿ ಅವರಲ್ಲಿತ್ತು. ಸ್ವತಃ ಕಾರ್ಗಿಲ್ ಗೆ ತೆರಳಲು ಸಿದ್ಧರಾದರು. ಜೂನ್ ೧೩ ರಂದು ಭೀಕರ ಯುದ್ಧ ನಡೆಯುತ್ತಿದ್ದ ವೇಳೆ ಕಾರ್ಗಿಲ್ಗೆ ಪ್ರಧಾನಿ ಬಂದೇ ಬಿಟ್ಟರು. ಪ್ರಧಾನಿ ಕಾರ್ಗಿಲ್ ಗೆ ಬಂದರೆ ಜೀವಸಹಿತ ಹಿಂದಿರುಗಲು ನಾವು ಬಿಡುವುದಿಲ್ಲ ಎಂದೂ ಪಾಕಿಗಳು ಬಹಿರಂಗ ಸವಾಲ್ ಹಾಕಿದ್ದರು. ಅವರು ಬಂದಿಳಿದ ಕೆಲವೇ ಕ್ಷಣದಲ್ಲಿ ಸಮೀಪದಲ್ಲೇ ೫ ಶಕ್ತಿಯುತ ಷೆಲ್ ಗಳ ದಾಳಿಯೂ ನಡೆಯಿತು.ಅಜಾತಶತ್ರುವಿನ ಗಟ್ಟಿ ಗುಂಡಿಗೆ ಭಯಬೀಳಲಿಲ್ಲ.

ಕಾ ‘ಆಪರೇಶನ್ ವಿಜಯ್’ ಕಾರ್ಯಾಚರಣೆಗೆ ಕರೆಕೊಟ್ಟರು. ಪಾಕ್ ಅತಿಕ್ರಮಿಸಿಕೊಂಡಿರುವ ಪ್ರತಿಯೊಂದು ಇಂಚು ನೆಲವನ್ನೂ ವಾಪಸ್ ಪಡೆದುಕೊಳ್ಳುವಂತೆ ವಾಜಪೇಯಿ ಆದೇಶಿಸಿದರು. ನಿಮ್ಮೊಂದಿಗೆ ಇಡೀ ದೇಶವಿದೆ ಎಂದು ಸೇನೆಯ ಬಲ ತುಂಬುವ ಕೆಲಸ ಮಾಡಿದರು.

ಪ್ರಧಾನಿ ವಾಜಪೇಯಿ ಅಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಐತಿಹಾಸಿಕ ಭಾಷಣದಲ್ಲಿ – “ನಮ್ಮ ಸೇನಾಪಡೆಗಳ ಮೇಲೆ ನನಗೆ ಪೂರ್ತಿ ವಿಶ್ವಾಸವಿದೆ. ನಮ್ಮ ಸೈನಿಕರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ, ಬೇರೆ ಯಾರು ಕೂಡ ಮುಂದೆಂದಿಗೂ ಇಂತಹಾ ದುಸ್ಸಾಹಸಕ್ಕೆ ಇಳಿಯದಂತೆ ಮಾಡುತ್ತಾರೆ” ಎಂದಿದ್ದರು. ಅದು ಅಕ್ಷರಶಃ ಸತ್ಯವಾಗಿತ್ತು. ಅಷ್ಟೇ ಅಲ್ಲದೇ ಅಮೆರಿಕಾದ ವಿರುದ್ಧ ಬಹಿರಂಗ ವಾಗೇ ಆಕ್ರೋಶ ವ್ಯಕ್ತ ಪಡಿಸಿದರು. ನೀವೇ ಪಾಕಿಸ್ತಾನಕ್ಕೆ ಬುದ್ಧಿ ಹೇಳಿ, ಇಲ್ಲದಿದ್ದರೆ ನಾವೇ ಪಾಠ ಹೇಳಿಕೊಡುತ್ತೇವೆ ಎಂದರು. ಇತ್ತ ಪಾಕಿಸ್ತಾನ ಅಮೇರಿಕಾದ ಕಾಲಿಗೆ ಬಿದ್ದು ಕದನ ವಿರಾಮ ಘೋಷಣೆ ಮಾಡಿತು. ಭಾರತಕ್ಕೆ ಮತ್ತೊಂದು ದೊಡ್ಡ ಗೆಲುವು ದೊರೆತಿತ್ತು. ಭಾರತದ ವಿರುದ್ಧ ಪಾಕಿಗಳಿಗೆ ೪ ನೇ ಸೋಲು ಅದಾಗಿತ್ತು.

ಆಗಷ್ಟೇ ಅಣು ಪರೀಕ್ಷೆ ಯನ್ನ ಯಶಸ್ವಿಯಾಗಿ ನಡೆಸಿ ಅಮೇರಿಕಾದ ಕೆಂಗಣ್ಣಿಗೆ ಗುರಿಯಾಗಿ, ವಿಶ್ವದ ಕಣ್ಣು ಕುಕ್ಕಿದ್ದ ಭಾರತದ ಘನತೆಯನ್ನ ಅಟಲ್ ಇನ್ನಷ್‍ಟು ಎತ್ತರಕ್ಕೆ ಏರಿಸಿದ್ದರು.. ವಿಶ್ವ ಮತ್ತೆ ಭಾರತವನ್ನ ಬೆರಗುಗಣ್ಣಿನಿಂದ ನೋಡಲಾರಂಭಿಸಿತು. ಆದರೆ ನೆನಪಿರಲಿ ಬಹುತೇಕ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತವು ಏಕೆಂದರೆ ಭಾರತ ಪಾಕಿಸ್ತಾನದ ಒಳಗೆ ಹೋಗಿ ಯುದ್ಧ ಮಾಡಿರಲಿಲ್ಲ. ಅಂತರರಾಷ್ಟ್ರೀಯ ಗಡಿ ರೇಖೆಯನ್ನ ಉಲ್ಲಂಘಿಸಿರಲಿಲ್ಲ. ಭಾರತ ಅಷ್ಟು ಅಚ್ಚುಕಟ್ಟಾಗಿ ಯುದ್ಧ ಗೆದ್ದಿತ್ತು. ಸೇನೆಯಲ್ಲಿ ಮದ್ದು-ಗುಂಡು ಗಳಿರದಿದ್ದರೇನಂತೆ, ಯೋಧರ ಆತ್ಮವಿಶ್ವಾಸ ಕಾರ್ಗಿಲ್ ನ ಎತ್ತರದ ಬೆಟ್ಟ ಗುಡ್ಡಗಳನ್ನೂ ಮೀರಿಸುವಂತಿತ್ತು!!

ನಮ್ಮ ಪ್ರಧಾನಿಯ ದಿಟ್ಟತನದ ಎಂತದ್ದಿತ್ತು ಎನ್ನುವುದನ್ನು ಅಂದಿನ ರಾಷ್ಟ್ರಪತಿಯಾಗಿದ್ದ ಆರ್.ಕೆ.ನಾರಾಯಣ್ ಅವರು ವಾಜಪೇಯಿಗೆ ಬರೆದ ಪತ್ರ ತಿಳಿಸುತ್ತೆ, ‘ನಿಮ್ಮ ಜೀವದ ಹಂಗು ತೊರೆದು, ಕೆಲವೇ ದೂರದಲ್ಲಿ ಸ್ಪೋಟಗಳು ನಡೆದರೂ ನೀವು ಯೋಧರ ಜೊತೆ ನಿಂತು ಅವರಿಗೆ ಸ್ಫೂರ್ತಿ ತುಂಬಿದ್ದು ನನಗೆ ನಿಮ್ಮ ಮೇಲಿನ ಗೌರವವನ್ನು ನೂರ್ಮಡಿ ಮಾಡಿದೆ’. ಈ ಸಾಲುಗಳೇ ಅಟಲರ ಶಕ್ತಿಯನ್ನ ಸಾರಿ ಹೇಳುತ್ತವೆ. ಪಾಕಿಸ್ತಾನಕ್ಕೆ ನಮ್ಮ ಯೋಧರು ಪಾಠ ಕಳಿಸಿ 19 ವರ್ಷ ಇಂದಿಗೆ ಕಳೆದಿದೆ. ಆ ಎಲ್ಲಾ ಹುತಾತ್ಮ ಯೋಧರಿಗೆ ನಮನಗಳು..!
#Jai_Hind..!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...