ನಾನಾ ರೀತಿಯ ಸಂಬಂಧಗಳು ನಮ್ಮ ಬದುಕಿನ ಭಾಗವಾಗಿ ಉಳಿಯುತ್ತವೆ. ಕೊನೆಯವರೆಗೂ ಜೊತೆ ಸಾಗಿದಂತವು ,ಮುಗುಳು ನಗೆಯೊಡನೆ ಮುನ್ನಡೆದಂತಹವು , ಬದುಕಿನ ಎಲ್ಲ ಪಾಠಗಳನ್ನೂ ಕಂಬನಿಯಲ್ಲಿ ಬರೆಸಿ ಕಲಿಸಿದಂತವು... ಇಲ್ಲಿ ದಾಖಲಾದವು ಕೂಡ ಕಾಡುವ ಮುಖಗಳೇ ಆದರೆ ಇವುಗಳೊಂದಿಗೆ ಕೊಂಚ ಹೆಚ್ಚೆನಿಸುವಷ್ಟು ಒಡನಾಟವಿದೆ. ಬದುಕಿನ ಕೆಲ ಪಾಠಗಳನ್ನು ಕಲಿಸಿವೆ, ಕ್ಷಣಗಳಲ್ಲಿನ ಬದುಕನ್ನು ಸಂಭ್ರಮಿಸುವುದನ್ನು ಕಲಿಸಿವೆ.
ಕೆಲ ವರ್ಷಗಳ ಹಿಂದೆ ಮನೆಯ ಹೊಸ್ತಿಲಿಗೆ ಅಂಟಿಕೊಂಡು ಕುಳಿತು ಅನ್ನಕ್ಕೆ ಬೇಕಾದಷ್ಟು ಅಕ್ಕಿಯನ್ನು ದಿನವೂ ಸ್ವಚ್ಚಗೊಳಿಸುವುದು ಹೆಂಗಸರ ನಿತ್ಯ ಕ್ರಿಯೆಯಾಗಿತ್ತು . ಸಿಕ್ಕ ಒಂದೆರಡು ಭತ್ತವನ್ನು ಕಸದ ಬುಟ್ಟಿಗೆ ಹಾಕುವ ಪಧ್ಧತಿ ಇರಲಿಲ್ಲ. ಅಲ್ಲೇ ಮುಂದೆ ಎಸೆಯುತ್ತಿದ್ದರು. ಎಲ್ಲಿಂದಲೋ ಹಾರಿ ಬಂದ ಗುಬ್ಬಿ ಭತ್ತವನ್ನು ತಿಂದು ಚೀಂವ್ ಗುಟ್ಟಿ ಹಾರಿ ಹೋಗುತ್ತಿತ್ತು. ಗುಬ್ಬಿ ನಮ್ಮ ದೈನಂದಿನ ಬದುಕಿನ ಭಾಗವಾಗಿತ್ತು. ಈಗ ಹೊಸ್ತಿಲಿನ ಮುಂದೆ ಕೂರುವರಾರು ? ಅಕ್ಕಿಯಲ್ಲಿ ಭತ್ತವೆಲ್ಲಿ ? ಒಂದೊಮ್ಮೆ ಭತ್ತವನ್ನು ಕೊಂಡು ತಂದು ಹಾಕಿದರೂ ಗುಬ್ಬಿ ಎಲ್ಲಿ ? ಮುಷ್ಠಿ ರಾಗಿಯನ್ನು ದಿನವಿಡಿ ತಿನ್ನುತ್ತಿದ್ದ ಗುಬ್ಬಿಯ ಜಾಗವನ್ನು ನಿಮಿಷಾರ್ಧದಲ್ಲಿ ತಟ್ಟೆ ಧಾನ್ಯವನ್ನು ಮುಗಿಸುವ ಪಾರಿವಾಳ ಆಕ್ರಮಿಸಿಕೊಂಡಿದೆ. ಸಣ್ಣ ದನಿಯ ಸೆಣಸಲಾರದ ಗುಬ್ಬಿಗಿಲ್ಲಿ ಸ್ಥಳವಿಲ್ಲ. ನಮ್ಮ ಬದುಕಿನಿಂದಲೂ ಕೆಲವು ಗುಬ್ಬಿಗಳು ಮರೆಯಾಗಿವೆ.

