Monday, July 29, 2019

#ಕನಸು ಕೆಂಡಸಂಪಿಗೆ..!


ಅವತ್ತೊಂದಿನ ಮಹಾನಗರದ ಅತಿ ಜನಜಂಗುಳಿ ವಾಸಿಸುವ ಪ್ರದೇಶದಲ್ಲಿ ನಡು ರಾತ್ರಿ, ಆ ಮನೆಯ ಬಾಲ್ಕನಿಯಿಂದ ಇಣುಕಿ ನೋಡಿದಾಗ ಸ್ಮಶಾನಕ್ಕೆ ಇಣುಕಿದಂತಾಗಿತ್ತು. ಆ ಕಿರಿದಾದ ಓಣಿಯ ಢಾಳು ಬೆಳಕಿನ ಬೀದಿದೀಪದ ಅಡಿಯಲ್ಲಿ ಒತ್ತೊತ್ತಾಗಿ ನಿಂತಿದ್ದ ಹತ್ತಾರು ಬೈಕುಗಳು ಸಾಲಾಗಿ ಜೋಡಿಸಿಟ್ಟ ಹೆಣಗಳಂತೆ ಕಂಡವು. ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಅಚ್ಚುಕಟ್ಟಿನ ಸಿಮೆಂಟು ನೆಲ, ಒಂದೇ ಒಂದು ಗಿಡವಿಲ್ಲ, ಗಾಳಿಯಿಲ್ಲ. ನಂಗೆ ಉಸಿರು ಕಟ್ಟಿದಂತಾಯಿತು, ತಲೆ ತಿರುಗಿದ್ದು ಭಯಕ್ಕೋ ಆಗಲೇ ತಲೆಗೇರಿದ್ದ ನಶೆಗೋ ತಿಳಿಯಲಿಲ್ಲ.

ಬಯಸಿದ ಬಾಗಿಲು ತೆರೆಯುವ ಮಾಯಾನಗರಿಗೆ ಊರು ಬಿಟ್ಟು ಬಂದವರಲ್ಲಿ ನಾನು ಒಬ್ಬ. ಇಲ್ಲಿ ಹಗಲೂ ಇಲ್ಲ, ರಾತ್ರಿಯೂ ಇಲ್ಲ. ಪಾಳಿಯ ಮೇಲೆ ದುಡಿತ, ಚಲಿಸುವ ಗಾಡಿಗೆ ಬಿಡುವಿಲ್ಲ. ಇಲ್ಲಿ ಕತ್ತಲೆ ಸಿಗುವುದಿಲ್ಲ. ಬೆಳಕಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಎರಡನೇ ಪಾಳಿಯಲ್ಲಿ ದುಡಿದು ನಡುರಾತ್ರಿ ಮನೆಗೆ ಮರಳುತ್ತಿರುವವನಿಗೆ ಬೆಳಕಿನದೇ ಕಾಟ, ಹಾದಿಗುಂಟ ಸಾಲು ಸಾಲು ಬೀದಿದೀಪ. ಭರ್ರೆಂದು ಓಡುವ ವಾಹನಗಳು, ಜಗಮಗಿಸುವ ಜಾಹಿರಾತು ಬವಳಿ ಬಂದಿದ್ದು ಸುಸ್ತಿಗೋ, ಭಯಕ್ಕೋ ತಿಳಿಯಲಿಲ್ಲ.


ನಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಕಾಡುತ್ತಿದೆ. ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲ. ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಬೇಕಿದೆ  . ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು, ಮಾರತಹಳ್ಳಿಯ ಮಾಲುಗಳು, ಎಂ.ಜಿ. ರೋಡಿನ ಬೀದಿಗಳು, ಕಡೆಗೆ ತಾನು ವಾಸಿಸುವ ಅಪಾರ್ಟ್ಮೆಂಟ್ ಗಳಲ್ಲಿ ಕತ್ತಲೆಯನ್ನು ಹುಡುಕಿಕೊಂಡು ಅಲೆದಿದ್ದು ಸಾಕಾಗಿದೆ.  ನನ್ನದಲ್ಲದ ಪ್ರಪಂಚದಲ್ಲಿ ಬದುಕುತ್ತಿದ್ದೇನೆ ಅನ್ನಿಸೋಕೆ ಶುರು ಆಗಿದೆ.

ಊರನ್ನು ನಾನು  ತೊರೆದಿಲ್ಲ ಊರು ತನ್ನೊಳಗೆ ತಾನಿದ್ದಲ್ಲೇ ಇದೆ ಎಂದೆನಿಸಿ ನಿರಾಳವಾಗುತ್ತದೆ . ಮಹಾನಗರದಲ್ಲಿ ಅಪರೂಪಕ್ಕೆ ಕಾವನೆರಳು ಸಿಕ್ಕಾಗಲೊಮ್ಮೊಮ್ಮೆ ಕನಸುಗಳಿಗೆ ಕಾವು ಸಿಗುತ್ತದೆ. ಮತ್ತೊಂದು ಕನಸು ಹುಟ್ಟುತ್ತದೆ. ಅದು ಮತ್ತೆ ಊರಿಗೆ ಮರಳುವ ಕನಸಾ ? ನನಗು ತಿಳಿದಿಲ್ಲ...!

-ಮತ್ತೆ ಸಿಗುವಾ ನಾಳೆಗಳ್ಳಿದ್ದರೆ 

Wednesday, July 24, 2019

" ಅಂಜಲಿ " - ವಾಸ್ತವದ ಪರಿಚಯ


ಕೆಲವೊಂದು ಕೆಲವೇ ಕೆಲವು ನಿಮಿಷದ  ಸಂಭಾಷಣೆ ಹೊತ್ತ ಕಿರುಚಿತ್ರಗಳು 3 ಗಂಟೆ Movie ಗಿಂತನು ಜಾಸ್ತಿ ಇಷ್ಟವಾಗುತ್ತವೆ  ಮನಮುಟ್ಟುತ್ತವೆ.  Mid-night ನಲ್ಲಿ ನೋಡಿದ ಈ ಕಿರುಚಿತ್ರ ಮನಸ್ಸು ಇನ್ನೊಂದು ಸಮಾಜದ ಬಗ್ಗೆ ಯೋಚಿಸೋ ಹಾಗೆ ಮಾಡಿತು....ಅದೇ "ಅಂಜಲಿ"

ಅತ್ಯುತ್ತಮ ಸಂಭಾಷಣೆ  ತುಂಬ ಹಿತವಾಗಿದೆ ಹಿನ್ನೆಲೆ ಸಂಗೀತ. ಕೇವಲ ಒಂದು ಕಾರಿನೊಳಗೆ ಬರೀ ಎರಡು ಪಾತ್ರಗಳನ್ನು ಇಟ್ಟುಕೊಂಡು ಸಾವಿರಾರು ಭಾವನೆಗಳನ್ನು ತೆರೆಯ ಮೇಲೆ ರೂಪಿಸುವುದು ತುಂಬಾ ಕಷ್ಟ. ಅಲ್ಲಲ್ಲಿ ಹಿನ್ನೆಲೆ ಸಂಗೀತ ಕಣ್ಣಲ್ಲಿ ನೀರು ಜಿನಿಗುಸುತ್ತಿದೆ. ಹೃದಯಕ್ಕೆ ತಲುಪಿದ ಚಿತ್ರ.

ಕತೆ, ಸಂಭಾಷಣೆ, ಅಭಿನಯ, ಛಾಯಗ್ರಹಣ, ಸಂಕಲನ, ಸಂಗೀತ, ಕತ್ತಲು(ಸಮಾಜದ), ಖಾಲಿ ರಸ್ತೆ (ಒಂಟಿತನ) ಸಂದರ್ಭ ಪರಿಸ್ಥಿತಿಯನ್ನು ಭಾವನೆಗಳೊಂದಿಗೆ ಸೆರೆಹಿಡಿದಿದ್ದು Simply Superb..!

ಆದ್ರೆ  Climax ನಲ್ಲಿ Cab driver ಮಾತುಗಳಿಂದ ಅಂಜಲಿ ಮನಸ್ಸು ಬದಲಾಗುವ ರೀತಿ ಇದ್ದಿದ್ರೆ ಎಲ್ಲರನ್ನು ತಲುಪುತ್ತಿತ್ತು ಅಂತ ನನ್ನ ಭಾವನೆ...!

Sunday, July 14, 2019

#ಮಹಾನಗರದ_ಮಹಾಚಾಳಿ..!


                     ಬೆಂಗಳೂರು ಹೇಗಿದೆ ಅಂತ ಮೂವತ್ತು ವರ್ಷಗಳಿಂದ ಬೆಂಗಳೂರಲ್ಲಿಯೇ ಇರುವ ಮಿತ್ರರೊಬ್ಬರ ಹತ್ತಿರ ಕೇಳಿದೆ. ಅವರು ಥಟ್ಟನೆ ಈ ಲೈಫಿನ ಹಾಗೆಯೇ ಇದೆ ಅಂದರು. ಈ ಲೈಫು ನನ್ನ ಆಯ್ಕೆಯಾಗಿರಲಿಲ್ಲ.ಆದರೆ ಒಮ್ಮೆ ಇದು ನನ್ನದಾದ ಮೇಲೆ ಇದು ನನ್ನದು ಅನ್ನುವ ಹೆಮ್ಮೆ, ಹಮ್ಮು ಎರಡೂ ನನ್ನನ್ನು ಸುತ್ತಿಕೊಂಡಿದೆ. ನಾನಿದನ್ನು ಈಗ ನಿರಾಕರಿಸಲಾರೆ. ಈಗಿದನ್ನು ನಾನು ತೊರೆಯಲಾರೆ. ಬೆಂಗಳೂರು ಕೂಡ ಹಾಗೆಯೇ ಅಂತ ಕೊಂಚ ರೂಪಕದಲ್ಲಿ ಮಾತಾಡಿದರು.

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಅನ್ನುವ ಭಾವನೆಯನ್ನು ಬೆಂಗಳೂರಿನ ಬಗ್ಗೆ ಅನೇಕರು ವ್ಯಕ್ತಪಡಿಸುತ್ತಾರೆ. ಬೆಂಗಳೂರಲ್ಲಿ ಏನು ಮಾಡುತ್ತೀರಿ ಅಂತ ಯಾರನ್ನಾದರೂ ಕೇಳಿದರೆ ಅವರು ಗಲಿಬಿಲಿಗೊಳ್ಳುತ್ತಾರೆ. ಇಲ್ಲಿ ನಾವೇನು ಮಾಡುತ್ತಿದ್ದೇವೆ ಎಂದು ಯೋಚಿಸಲು ಶುರುಮಾಡಿದರೆ ತಲೆಕೆಡುತ್ತದೆ. ನಾವು ದುಡಿಯುತ್ತೇವೆ. ತಿನ್ನುತ್ತೇವೆ. ಖರ್ಚು ಮಾಡುತ್ತೇವೆ, ಮತ್ತೆ ದುಡಿಯುತ್ತೇವೆ, ಖರ್ಚು ಮಾಡಲಾಗದಷ್ಟನ್ನು ದುಡಿಯಲು ನೋಡುತ್ತೇವೆ. ಇದನ್ನೇ ಜೀವನ ಅಂದುಕೊಳ್ಳುತ್ತೇವೆ.

ಮಹಾನಗರಗಳಿಗೆ ಒಂದು ವಿಚಿತ್ರವಾದ ಚಾಳಿಯಿದೆ. ಅದು ಮನುಷ್ಯನನ್ನು ದುಡಿಯಲು ಹಚ್ಚುತ್ತದೆ. ಹೆಚ್ಚು ಹೆಚ್ಚು ದುಡಿಯಲು ಪ್ರೇರೇಪಿಸುತ್ತದೆ. ಹೆಚ್ಚು ಹೆಚ್ಚು ದುಡಿಮೆ ಮಾಡಿದವನಿಗೆ ಹೆಚ್ಚು ಹೆಚ್ಚು ದುಡ್ಡು ಕೊಡುತ್ತದೆ. ಹಾಗೆ ಕೊಟ್ಟ ಹೆಚ್ಚುವರಿ ದುಡ್ಡನ್ನು ಅದು ಅತಿ ವಿನಯದಿಂದ ವಾಪಸ್ಸು ತೆಗೆದುಕೊಳ್ಳುತ್ತದೆ.

ನಾನು ಬೆಂಗಳೂರಿಗೆ ಇಪ್ಪತ್ತೆಂಟು ವರ್ಷಗಳ ಹಿಂದೆ ಕಾಲಿಟ್ಟಾಗ ಒಂದು ಮಧ್ಯಮ ವರ್ಗದ ಕುಟುಂಬದ ಸರಾಸರಿ ಆದಾಯ ತಿಂಗಳಿಗೆ ಏಳು ಸಾವಿರ ಇತ್ತು. ಆಗ ಎಪ್ಪತ್ತು ಸಾವಿರಕ್ಕೆ ಒಂದು ಸೈಟು ಸಿಗುತ್ತಿತ್ತು. ಮತ್ತೊಂದು ಎಪ್ಪತ್ತು ಸಾವಿರ ಖರ್ಚು ಮಾಡಿದರೆ ಒಂದು ಮನೆ ಕಟ್ಟಿಸಿಕೊಳ್ಳಬಹುದಿತ್ತು. ಏಳು ಸಾವಿರ ಸಂಬಳ ಇದ್ದರೆ ಮಗಳ ಮದುವೆ ಮಾಡಲು, ಬಂಗಾರ ಕೊಳ್ಳಲು ಹಣ ಉಳಿಸಬಹುದಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರಿಗೂ ಪ್ರತಿಯೊಂದು ವಸ್ತುವಿನ ಬೆಲೆ ಮತ್ತು ಮೌಲ್ಯ ಗೊತ್ತಿತ್ತು. ಯಾರೂ ಕೂಡ ಒಂದು ಶರಟಿಗೆ ಐದು ಸಾವಿರ ಕೊಡುತ್ತಿರಲಿಲ್ಲ. ಒಂದು ಕಾರಿಗೆ ಎಪ್ಪತ್ತು ಲಕ್ಷ ಖರ್ಚು ಮಾಡುತ್ತಿರಲಿಲ್ಲ. ಒಂದು ಮನೆಗೆ ಒಂದು ಕೋಟಿ ವೆಚ್ಚ ಮಾಡುತ್ತಿರಲಿಲ್ಲ. ಅಷ್ಟೊಂದು ಖರ್ಚು ಮಾಡುವ ಬೆರಳೆಣಿಕೆಯ ಕೆಲವರು ಸೂಪರ್ ರಿಚ್ ಅನ್ನಿಸಿಕೊಳ್ಳುತ್ತಿದ್ದರು. ಅವರನ್ನು ಮಿಕ್ಕವರು ಅಸೂಯೆಯಿಂದ ನೋಡುತ್ತಿರಲಿಲ್ಲ. ಅವರಂತಾಗಬೇಕು ಎಂದು ಯಾವತ್ತೂ ಬಯಸುತ್ತಿರಲಿಲ್ಲ.

ಆದರೆ ಇವತ್ತು ಒಂದು ಅಪಾರ್ಟ್ ಮೆಂಟಿನ ಬೆಲೆ ನಾಲ್ಕು ಕೋಟಿ ಅಂದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಆ ನಾಲ್ಕುಕೋಟಿಯನ್ನು ಹೇಗೆ ಹೊಂದಿಸುವುದು ಎಂದು ಲೆಕ್ಕಾಚಾರ ಶುರುಮಾಡುತ್ತೇವೆ. ಎಪ್ಪತ್ತು ಲಕ್ಷ ರುಪಾಯಿಯ ಕಾರು ಬಂದಿದೆ ಅಂದಾಗ ತಿಂಗಳ ಕಂತು ಎಷ್ಟು ಬರುತ್ತದೆ ಅಂತ ಲೆಕ್ಕಾಚಾರ ಹಾಕುತ್ತೇವೆ. ಮನೆಯ ತಿಂಗಳ ರೇಷನ್ ಬಿಲ್ಲನ್ನು ಹೊಟೇಲಿನ ಒಂದು ಊಟಕ್ಕೆ ಖರ್ಚು ಮಾಡುತ್ತೇವೆ. ಸಾವಿರ ರುಪಾಯಿಯಲ್ಲಿ ಮುಗಿಯುತ್ತಿದ್ದ ಎಲ್ಕೇಜಿ ಮಗುವಿನ ಶಿಕ್ಷಣಕ್ಕೆ ಒಂದು ಲಕ್ಷ ಫೀಸು ಕೊಡುತ್ತೇವೆ. ಚಿಕ್ಕನಾಯಕನ ಹಳ್ಳಿಯಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಲು ಪುರುಸೊತ್ತಿಲ್ಲ ಅಂತ ಹೇಳುವವರು, ಆರು ಲಕ್ಷ ರುಪಾಯಿ, ಏಳು ಹಗಲು ಏಳು ರಾತ್ರಿ ಖರ್ಚು ಮಾಡಿ Schengen visa ಕೈಲಿ ಹಿಡಕೊಂಡು ಅರ್ಧ ಯುರೋಪು ಸುತ್ತಿ ಬರುತ್ತೇವೆ. ರಸ್ತೆಯಲ್ಲಿ ಸೀಮೆಬದನೆ ಮಾರಿಕೊಂಡು ಬರುವ ಹೆಂಗಸಿನ ಹತ್ತಿರ ಅರ್ಧಗಂಟೆ ಚೌಕಾಸಿ ಮಾಡುತ್ತೇವೆ, ಐಬ್ಯಾಕೋ ಐಸ್ಕ್ರೀಮಿಗೆ ಇನ್ನೂರು ರುಪಾಯಿ ಕೊಡುತ್ತೇವೆ. ಮಕ್ಕಳಿಗೆ ಪಾಠ ಹೇಳಿಕೊಡಲು ಪುರುಸೊತ್ತಿಲ್ಲ ಅಂತ ಗೊಣಗಾಡಿ, ಅವರನ್ನು ಟ್ಯೂಷನ್ನಿಗೆ ಕಳಿಸುತ್ತೇವೆ. ಟ್ಯೂಷನ್ ಮನೆಯ ಹೊರಗಡೆ ಕಾರಲ್ಲಿ ನಾವು ಫೇಸ್ ಬುಕ್ ನೋಡುತ್ತಾ, ವಾಟ್ಸ್ಯಾಪ್ ಮಾಡುತ್ತಾ ಕೂತಿರುತ್ತೇವೆ.

ಈ ಹೆಚ್ಚು ದುಡಿಯುವ ಹೆಚ್ಚು ಖರ್ಚು ಮಾಡುವ ಆಧುನಿಕ ಜೀವನ ವಿನ್ಯಾಸದಲ್ಲಿ ನಾವು ನಮ್ಮನ್ನೇ ಬಲಿಕೊಟ್ಟುಕೊಳ್ಳುತ್ತಿದ್ದೇವೆ ಅನ್ನಿಸುತ್ತದೆ. ಈ ನಗರದ ಜೀವನದೇ ಒಂದು ಅರ್ಥದಲ್ಲಿ ಬ್ಲೂವೇಲ್ ಆಟದಂತೆ ರೂಪಿತವಾದಂತಿದೆ. ಇಲ್ಲಿ ಯಾರೋ ಟಾಸ್ಕ್ ಕೊಡುತ್ತಾರೆ. ಅವರು ಕೊಡುವ ಟಾಸ್ಕುಗಳನ್ನು ಪೂರ್ತಿಮಾಡಲು ನಾವು ಹೆಣಗಾಡುತ್ತೇವೆ. ಇಪ್ಪತ್ತು ನಿಮಿಷದಲ್ಲಿ ಎಂಟು ಕಿಲೋಮೀಟರ್ ದೂರದಲ್ಲಿರುವ ಮನೆಗೆ ಫಿಜ್ಜಾ ಕೊಟ್ಟು ಬರುವ ಟಾಸ್ಕು, ಎರಡೇ ವಾರದಲ್ಲಿ ಚಾನಲ್ಲಿನ ಟಿಆರ್‌ಪಿಯನ್ನು ಎರಡರಷ್ಟು ಮಾಡುವ ಟಾಸ್ಕು, ರಾತ್ರಿ ಸಂದಿಗೊಂದಿಗಳಲ್ಲಿ ಅಡಗಿ ನಿಂತು ಕುಡುಕರನ್ನು ಹಿಡಿದು ಸರ್ಕಾರದ ಆದಾಯ ಹೆಚ್ಚಿಸುವ ಟಾಸ್ಕು, ಮಕ್ಕಳನ್ನು ನಂಬರ್ ವನ್ ಮಾಡುವ ಟಾಸ್ಕು, ಹಗಲಿಡೀ ದುಡಿದು, ರಾತ್ರಿ ಕುಡಿದು, ಮನೆಗೆ ಬಂದು ಆಮೇಲೊಂದು ಸಿನಿಮಾ ನೋಡಿ, ನಿದ್ದೆಗಣ್ಣಲ್ಲಿ ಪ್ರವಾಸ ಮಾಡಿ- ತುಂಬು ಜೀವನ ಜೀವಿಸುತ್ತಿದ್ದೇನೆ ಎಂದು ಸಾಬೀತು ಮಾಡುವ ಟಾಸ್ಕು, ಕೊನೆಗೆ ನಮ್ಮನ್ನು ನಾವೇ ನಮಗೇ ಗೊತ್ತಿಲ್ಲದ ಹಾಗೆ ಕೊಂದುಕೊಳ್ಳುವ ಕೊನೆಯ ಟಾಸ್ಕು.

ಇಂಥದ್ದರ ನಡುವೆಯೇ ಒಂದು ಪವಾಡದಂತೆ ಇನ್ನೊಂದೇನೋ ನಡೆಯುತ್ತದೆ. ಯಾರೋ ಬರೆದ ಕತೆಯನ್ನು ಮತ್ಯಾರೋ ಓದಿ ಕಣ್ಣೊದ್ದೆ ಮಾಡಿಕೊಳ್ಳುತ್ತಾರೆ. ಈ ಧಾವಂತದಲ್ಲಿ ನಾನಿಲ್ಲ ಅಂತ ಒಂದಷ್ಟು ಮಂದಿ ತಮ್ಮ ಪಾಡಿಗೆ ಸುಖವಾಗಿದ್ದಾರೆ. ದೇವಸ್ಥಾನದ ಕಟ್ಟೆಗಳು, ಜಯನಗರದ ಪಾರ್ಕುಗಳು, ಟೀ ಅಂಗಡಿಯ ಜಗಲಿಗಳು, ಸೋಮಾರಿತನದ ಅಡ್ಡೆಗಳು ಜೀವಂತವಾಗಿವೆ. ಯಾರೋ ಎಲ್ಲೋ ಕೂತುಕೊಂಡು ಈ ದಾಂಗುಡಿಯಿಡುವ ಜಗತ್ತಿನ ಹುಚ್ಚು ಹಂಬಲದಿಂದ ದೂರವಿದ್ದುಕೊಂಡು ಕುಮಾರವ್ಯಾಸನನ್ನು ಓದಿ ಸುಖವಾಗಿರುತ್ತಾರೆ.

ಆಲ್ಬರ್ಟ್ ಕಮೂ ಬರೆದ ಮಿಥ್ ಆಫ್ ಸಿಸಿಫಸ್ ಎಂಬ ಪ್ರಬಂಧ ನೆನಪಾಗುತ್ತಿದೆ. ದೇವರುಗಳ ಶಾಪಕ್ಕೆ ಒಳಗಾದ ಸಿಸಿಫಸ್ ಎಂಬಾತನಿಗೆ ಕೊಟ್ಟ ಶಿಕ್ಷೆ ಸ ತುಂಬ ಸರಳವಾಗಿತ್ತು. ಆತ ಒಂದು ಉರುಟಾದ ಕಲ್ಲನ್ನು ಉರುಳಿಸಿಕೊಂಡು ಹೋಗಿ ಬೆಟ್ಟದ ತುದಿಯೊಂದರಲ್ಲಿ ಇಟ್ಟುಬರಬೇಕಾಗಿತ್ತು. ಯಾವಾಗ ಆತ ಆ ಕಲ್ಲನ್ನು ಬೆಟ್ಟದ ತುದಿಯಲ್ಲಿಟ್ಟು ಬರುತ್ತಾನೋ ಅಲ್ಲಿಗೆ ಅವನ ಶಿಕ್ಷೆ ಮುಗಿದಂತೆ. ಆತ ಆ ಕಲ್ಲನ್ನು ಕಷ್ಟಪಟ್ಟು ಉರುಳಿಸಿಕೊಂಡು ಹೋಗಿ ಬೆಟ್ಟದ ತುದಿಯಲ್ಲಿಟ್ಟು ಕೈ ಬಿಡುತ್ತಿದ್ದಂತೆ ಆ ಕಲ್ಲು ಮತ್ತೆ ಉರುಳಿಕೊಂಡು ಬೆಟ್ಟದ ಬುಡಕ್ಕೆ ಬಂದುಬಿಡುತ್ತಿತ್ತು. ಸಿಸಿಫಸ್ ಮತ್ತೆ ಅದನ್ನು ಬೆಟ್ಟದ ತುದಿಗೆ ಉರುಳಿಸಿಕೊಂಡು ಹೋಗುತಿದ್ದ. ಇದು ಕೊನೆಯೇ ಇಲ್ಲದ ಶಿಕ್ಷೆ.
ನಾವು ಕೂಡ ಸಿಸಿಫಸ್ ಆಗಿದ್ದೇವಾ? ಬೆಟ್ಟದ ತುದಿಗೆ ಕಲ್ಲೊಂದನ್ನು ಉರುಳಿಸಿಕೊಂಡು ಹೋಗುತ್ತಲೇ ಇದ್ದೇವಾ?

" ಇರುವುದೆಲ್ಲವ ಬಿಟ್ಟು ಇರದುದಕ್ಕೆ ತಹತಹಿಸುತ್ತಲೇ ಕ್ಷಣಗಳಲ್ಲಿ ಸಂತಸ ಕಳೆದು ಕೊಂಡು ಬಿಡುತ್ತಿರುವ ಎಲ್ಲರಲ್ಲೂ ಒಬ್ಬ ಸಿಸಿಫಸ್ ಇದ್ದೇ ಇದ್ದಾನೆ. No escapade, we all are in a ruthless rut..!
                                                                                                                               .... (ಎಲ್ಲೋ ಓದಿದ್ದು)

Tuesday, July 2, 2019

#ಏಕಾಂತದ ಮಿತ್ರನೊಂದಿಗಿನ ಸಂಭಾಷಣೆ..!


ಹಾರಿ ಹೋಗಿ ಬಿಡಲೇ..???
ನನ್ನಿಂದ ನಾ ಕಳೆದುಹೋಗುವ ಮುನ್ನಾ
ಬಾನು ಸೇರಿ ಬಿಡಲೇ…???
ಗೂಡು ಪಂಜರವಾಗುವ ಮುನ್ನಾ

ಸಂಬಂಧಗಳಿಂದ ನಿರೀಕ್ಷೆ ನನಗೇಕೆ ?
ಬಂಧಗಳ ಬೆಸುಗೆಯ ಹಂಗೇಕೆ ?
ಗರಿಗೆದರ ಹೋದರೆ ಅರಿವಾಗುತ್ತಿದೆ
ಒಂದೊಂದು ಗರಿಗೂ ಒಂದೊಂದು ಸಂಬಂಧ …!!!

ಬಂಧಗಳ ಬಂಧನ ಕಳಚದೆ
ಹಾರುವ ಹಾಗಿಲ್ಲಾ
ಸಂಬಂಧಗಳ ಗರಿ ಕಳಚಿದಂತೆ
ಹಾರುವ ರೆಕ್ಕೆಗಳಿಗೆ ಬಲವಿಲ್ಲಾ

ಉಳಿದು ಬಿಡಲೇ ಹೀಗೆ
ಬಲ್ಲವರಿಗೆ ಪರಿಚಿತನಾಗಿ
ಅರಿತವರಿಗೆ ಚಿರಪರಿತನಾಗಿ
ನನ್ನೊಳಗಿನ ಅಪರಿಚಿತನನ್ನು ಮರೆತು ?

ಬಂಧನಗಳಿಂದಲೇ ಈ ಬಾಳು
ಬಾಳಿನಿಂದಲೇ ಈ ಬಂಧನಾ
ಅನ್ವೇಷಣೆಯ ಪ್ರಯತ್ನವೇ ವ್ಯರ್ಥ
ಬಹುಶಃ ಇದೇ ಜೀವನದ ಸತ್ಯ..!

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...