ಇರುವುದೆಲ್ಲವ_ಬಿಟ್ಟು🎭
#ಖಾಲಿ ಹಾಳೆಯ ಮೇಲೆ ಬರೆಯದೆ ಉಳಿದ ಕೆಲವು ಸಾಲುಗಳು...✍🏽✍🏽
Wednesday, January 1, 2025
ಇದು ಬೇರೆ ಏನು ಅಲ್ಲಾ Tax-Terrorism..💯
Sunday, August 4, 2024
#ಬದುಕು ಮಾತ್ರ ಆಧುನಿಕವಾಗುವುದೇ ಇಲ್ಲ...!📚📲
ನಾವು ಅದೇ ಹಳೆಯ ನೆನಪುಗಳಲ್ಲಿ, ಹಳೆಯ ವರಸೆಗಳಲ್ಲಿ, ಹಳೆಯ ಜಗಳಗಳಲ್ಲಿ ಮುಳುಗಿಹೋಗಿರುತ್ತೇವೆ.
ಇತ್ತೀಚೆಗೆ Facebook, Instagram ಗಳೆಲ್ಲಾ ನನ್ನನ್ನು ತೀರಾ Excite ಮಾಡುತ್ತಿಲ್ಲ..
ಫೇಸ್ಬುಕ್ ವೈಯುಕ್ತಿಕ ಅಕೌಂಟ್ ಓಪನ್ ಮಾಡುವುದೇ ರೇರ್ ಆಗಿದೆ..ಓಪನ್ ಮಾಡಿದರೂ Lit up eyes ಜೊತೆ ನೋಡದೇ ಹಾಗೆ ಸುಖಾಸುಮ್ಮನೆ Scroll ಮಾಡುವುದೇ ಹೆಚ್ಚು! ಸ್ವಂತ ಫೋಟೋ-ಸೆಲ್ಫೀಗಳು ಅಂತೂ zero ಇಂಟರೆಸ್ಟ್!
ಜೀವನದ ಒಂದು ಹಂತದ ಬಳಿಕ ಅಥವಾ ಬದುಕಿನ ಜವಾಬ್ದಾರಿಗಳು ಹೆಚ್ಚಾದಾಗ ಈ ಸಾಮಾಜಿಕ ಜಾಲತಾಣ..ಪೋಸ್ಟು,ಲೈಕ್,ಟ್ರೆಂಡುಗಳು ಇವೆಲ್ಲಾ ಗೌಣ ಅನಿಸಿಬಿಡುತ್ತೆ..
ಇದೊಂದು ಭ್ರಮಲೋಕ..ರಿಯಾಲಿಟಿಯ ಸವಾಲುಗಳಿಗೂ-ಇಲ್ಲಿಗೂ ಕೆಲವೊಮ್ಮೆ ಲಿಂಕೇ ಇಲ್ಲ..ಸಾವಿರಾರು ಫ್ರೆಂಡ್ಸ್ ಇದ್ದರೂ ಆಗಾಗ ಮನದ ಮಾತುಗಳ ಹೇಳೋಕೆ ಒಬ್ಬರು ಇರದಂತಹ ಸತ್ಯಗಳಿವೆ!
ಸುಮ್ಮನೆ ಡಾಕುಮೆಂಟರಿ ಪ್ಲೇ ಮಾಡಿ ಬೇಕಾದರೆ ನಿರಂತರ ನೋಡಬಯಸುತ್ತೆ ಮನ..ಹೊಸ ಸಕಾರಾತ್ಮಕ ವಿಷಯಗಳ ತಿಳಿದುಕೊಳ್ಳಲು ಮೆದುಳು ಹೆಚ್ಚು ಬಯಸುತ್ತದೆ..
ಎದ್ದರೂ ಬಿದ್ದರೂ ಇಲ್ಲಿ ತಂದು ರಾಶಿ ಹಾಕೋದಕ್ಕಿಂತಾ ತಮ್ಮ ಪಾಡಿಗೆ ತಾವಿರೋಣ,ನಮ್ಮ ಗುರಿಗಳು,ಕರ್ತವ್ಯಗಳತ್ತ ಫೋಕಸ್ ಮಾಡೋಣ ಸಾಕು ಅನಿಸಿಬಿಡುತ್ತೆ!
ಈ Virtual Fantasy ಸಾಕು..ತಂದೆ ತಾಯಿ ಮಡದಿ ಮಕ್ಕಳು ಹೀಗೆ ಸಂಬಂಧಗಳ ಗಟ್ಟಿಮಾಡಿ ಸುಖ ಕಷ್ಟಗಳ ಮಾತಾಡುವ..ಸಾಧ್ಯವಾದಷ್ಟು ನೋವಿಗಳಿಗೂ ಸ್ಪಂದಿಸುವ, ಚಿಕ್ಕ ಖುಷಿಗಳ ಸಂಭ್ರಮಿಸುವ, ವೃತ್ತಿಯಲ್ಲಿ ಇನ್ನಷ್ಟು Creative ಆಗುವ ಎನ್ನುವ Realisation ಹೆಚ್ಚಾಗತೊಡಗುತ್ತೆ..!
ನಾನೇ Studious or limited ಆಗಿಬಿಟ್ನಾ
ಅಥವಾ ನಿಮಗೂ ಹಾಗೆ ಅನಿಸಿದ್ಯಾ?
- ಮತ್ತೆ ಸಿಗುವಾ ನಾಳೆಗಳ್ಳಿದ್ದರೆ
Monday, December 4, 2023
#ಮಳೆ|ಕಾಪಿ☕️|ಪುಸ್ತಕ📚...❤️
ತುಂತುರು ಮಳೆಯ ಮೊದಲ ಹನಿಗಳು ಇಳೆಗೆ ಸುರಿದ ಸಾಕ್ಷಿಯಾಗಿ, ಒದ್ದೆ ಮಣ್ಣಿನ ಘಮಲು ಮೂಗಿಗೆ ಅಪ್ಪಳಿಸಿದಾಗ ನಾನು Virtual ಮೀಟಿಂಗೊಂದನ್ನು ಆಗತಾನೆ ಮುಗಿಸಿದ್ದೆ. ಸಂಜೆಯ ಮಾಮೂಲು ಮೀಟಿಂಗು. ಅರ್ಧ ಘಂಟೆಯಿಂದ ಮ್ಯೂಟ್ ನಲ್ಲಿದ್ದ ನನ್ನ ಮೈಕ್ರೋಫೋನ್ "Thanks Everyone" ಎಂದಷ್ಟೇ ಹೇಳಲು Unmute ಆಗಿತ್ತು. ಅವರೇ ಮಾತಾಡುವುದಾದರೆ ಯಾಕಾದರೂ ನನ್ನನ್ನು ಅದರೊಳಗೆ ಎಳೆಯುತ್ತಾರೋ ಎಂಬ ಹುಸಿಕೋಪ ಬೂದಿಮುಚ್ಚಿದ ಕೆಂಡದಂತೆ ತಿಂಗಳಿಂದ ನನ್ನೊಳಗೆ ಬುಸುಗುಡುತ್ತಲೇ ಇದೆ. ನನ್ನ ಗೋಳನ್ನು ಹೇಳುವಷ್ಟರಲ್ಲಿ ಅದೋ ಮಳೆ ಸುರಿದೇ ಬಿಟ್ಟಿತು. ಈ ಬಾರಿ ಮಳೆ ಕಡಿಮೆ. ಆದರೂ ಸಂಜೆಯೊಮ್ಮೆ ಪಿರಿ ಪಿರಿ ಸುರಿದು ಇಳೆಯನ್ನು ತಂಪು ಮಾಡುವ ಮಳೆರಾಯ ಮುದುಡಿರುವ ಮನಸ್ಸನ್ನೂ ಅರಳಿಸುತ್ತಾನೆ. ಮಳೆ ಬಂದಾಗ ಕಾಪಿ ಕುಡಿಯಲೇ ಬೇಕೆನ್ನುವ ಅಲಿಖಿತ ನಿಯಮ ನಮ್ಮ ಮನೆಯಲ್ಲಿದೆ. ಕಾಫಿಯ ಸಾಂಗತ್ಯವೇ ಇಲ್ಲದಿದ್ದ ನಾನು, ಈಗ ಅದರ ನಿಷ್ಠಾವಂತ ಅನುಯಾಯಿಯಾಗಿದ್ದೇನೆ ಎಂದರೆ ಕಾಪಿ ಅದೆಂತ ಮೋಡಿಗಾರ ಎಂದು ನೀವೇ ಯೋಚನೆ ಮಾಡಿ. ಸಂಜೆಯ ತಂಪು ಗಾಳಿಗೆ ದಿನದ ಕೊನೆಯ ಲೋಟ! ಹೀಗೆ ದಿನ ಪೂರ್ತಿ ಕಾಪಿಯ ಆರಾಧನೆ ನಮ್ಮ ಮನೆಯಲ್ಲಿ ನಡೆಯುತ್ತಿರುತ್ತದೆ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಹೊಸತರಲ್ಲಿ ಫಿಲ್ಟರ್ ಕಾಪಿಯನ್ನು ಹೀರುವ ಕ್ರೇಜ್ ಹುಟ್ಟಿಕೊಂಡರೂ ನನಗೆ ಚಹಾವೇ ಪ್ರಿಯವಾಗಿತ್ತು. ಈಗೀಗ ಕಾಪಿ ನನ್ನನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ ಚಹಾ ಅಪರೂಪದ ವ್ಯಕ್ತಿಯಾಗಿ ಕಾಣಿಸಿಕೊಂಡು ಕಾಫಿ, ನಮ್ಮ ಮನೆಯ ಸದಸ್ಯನಂತೆಯೇ ಮನದಲ್ಲಿ ನೆಲೆಯೂರಿದೆ. ಹಾಗಂತ ಕಾಫಿಗೇ ಸೀಮಿತವಾಗದ ನಮ್ಮ ಸಂಜೆಗಳು ಏಲಕ್ಕಿ ಬೆರೆಸಿದ ಚಹಾದ ರುಚಿಯನ್ನೂ ಆಗಾಗ ಕಾಣುವುದುಂಟು. ಹಳೆಯ ಪ್ರೇಮ್ ಕಹಾನಿ ನೋಡಿ! ಅಷ್ಟು ಬೇಗ ಬಿಡಲಾಗುವುದಿಲ್ಲ.
ಮಳೆಯಿಂದ ಕಾಪಿಯತ್ತ ಹರಿದ ನನ್ನ ಚಿತ್ತವನ್ನು ಮರಳಿ ಮೇಜಿನ ಮೇಲೆ ತಂದದ್ದು ಅದರ ಮೇಲಿದ್ದ ಪುಸ್ತಕಗಳು. ಜಡವಾದ ಬದುಕಿಗೊಂದು ಅರ್ಥ ಕೊಡುವ ಯೋಗಿಯಂತೆ ತನ್ಮಯತೆಯಿಂದ ತಟಸ್ಥವಾಗಿ ಕೂತಿದ್ದ ಪುಸ್ತಕಗಳು ಇರದಿದ್ದರೆ ಈ ಬಾಳು ಅದೆಷ್ಟು ಶೂನ್ಯವೆನಿಸುತ್ತಿತ್ತೋ! ಎಲ್ಲಕ್ಕಿಂತ ಮೇಲೆದಿದ್ದದ್ದುಹೋದ ವಾರವಷ್ಟೇ ಕೊಂಡ ಕಾಲ್ ನ್ಯೂಪೋರ್ಟ್ ನ 'Deep Work'. ಬರೀ ರಗಳೆಗಳೇ ತುಂಬಿದ ಜಗತ್ತಿನಲ್ಲಿ ಏಕಾಗ್ರತೆಯಿಂದ ಕೆಲಸ ಮಾಡಿ ಯಶಸ್ವಿಯಾಗುವುದು ಹೇಗೆಂದು ತಿಳಿಸಿಕೊಡುವ ಪುಸ್ತಕವದು. ಈ ಕೆಲಸದ ಜಂಜಾಟವನ್ನೆಲ್ಲ ಮರೆತು, ಲೈಬ್ರರಿಯಲ್ಲೋ ಹಳೆಯ ಪುಸ್ತಕದ ಅಂಗಡಿಯಲ್ಲೋ ಪುಸ್ತಕ ಓದಿಕೊಂಡೇ ಬದುಕನ್ನು ಕಳೆಯಬೇಕು ಎಂದೆನಿಸುವುದುಂಟು. ಪುಟಗಳ ನಡುವೆ ಕಳೆದುಹೋಗಿ, ಅಕ್ಷರಗಳೊಂದಿಗೆ ಬೆರೆತು, ಇನ್ಯಾವುದೋ ಲೋಕದಲ್ಲಿ ಅಲೆಮಾರಿಯಂತೆ ಇದ್ದುಬಿಡುವ ಕನಸು.."A reader lives a thousand lives before he dies, and the one who doesn't read, lives just one"..! ಎಂದು ಜಾರ್ಜ್ ಮಾರ್ಟಿನ್ ಹೇಳಿದಂತೆ ಸಾಯುವ ಮುನ್ನ ಸಾವಿರಾರು ಲೋಕದಲ್ಲಿ ವಿಹರಿಸಬೇಕೆನ್ನುವ ಹಿರಿದಾದ ಕನಸು! ಪೂರ್ತಿಯಾಗಿ ಪುಸ್ತಕ ಲೋಕದಲ್ಲಿ ಕಳೆದು ಹೋಗುವುದು ನನ್ನ ಮಟ್ಟಿಗೆ ದೂರದ ಮಾತಾದರೂ ವಾರಕ್ಕೊಂದು ಲೋಕವನ್ನು ಸುತ್ತಿಬರುವುದು ರೂಢಿಯಾಗಿದೆ.
ಇಷ್ಟೆಲ್ಲಾ ಯೋಚಿಸುವಾಗ ಮಡದಿ ಬೆಚ್ಚನೆಯ ಕಾಪಿಯನ್ನು ತಂದು ಮೇಜಿನ ಮೇಲಿಟ್ಟಳು. ಮಳೆ, ಕಾಫಿ, ಪುಸ್ತಕ - ಆಹಾ, ಎಂತಹ ವಿಶೇಷವಾದ ಕಾಂಬಿನೇಶನ್! ಹಳೆಯ ಸಿನೆಮಾದ ಅಮರ್-ಅಕ್ಬರ್-ಆಂಟನಿಯ ಹಾಗೆ. ಪಕ್ಕದಲ್ಲಿಯೇ ಇದ್ದ ಲ್ಯಾಪ್ಟಾಪ್, ಬಗೆ ಬಗೆಯ ನೋಟಿಫಿಕೇಶನ್ ಗಳನ್ನು ಬಿತ್ತರಿಸಿ ನನ್ನ ಗಮನ ಸೆಳೆಯಲು ಯತ್ನಿಸಿ ಸೋಲುತ್ತಿತ್ತು. ನಾನು ನನ್ನ ಪಾಡಿಗೆ ಹೊರಗೆ ಸುರಿಯುವ ಮಳೆಯನ್ನು ನೋಡುತ್ತಾ, ಬಿಸಿ ಬಿಸಿ ಕಾಪಿಯನ್ನು ಆಸ್ವಾದಿಸುತ್ತಾ, ಈ ವಾರಾಂತ್ಯ ಯಾವ ಪುಸ್ತಕ ಓದಲಿ ಎಂದು ಯೋಚಿಸುತ್ತಾ ಕೂತಿದ್ದೆ. ಒಂದು ಅದ್ಭುತ ಕಲಾಕೃತಿಯಂತೆ ಪ್ರತಿಯೊಂದು ಘಳಿಗೆಯೂ ಮನಸಿನಲ್ಲಿ ಅಚ್ಚೋಚ್ಚುತ್ತಿತ್ತು. ನಾನು ಕಲಾವಿದನಾಗಿ ಬದಲಾಗಿದ್ದೆ. ಅರೆಕ್ಷಣ ಮೌನ! ಟುಣ್...ಟುಣ್...ಟುಣ್... ಎಲ್ಲಿಂದಲೋ ಹೊಮ್ಮಿದಂತೆ ನಿಧಾನವಾಗಿ ಕೇಳಿದ ಆ ಸದ್ದು, ಕ್ರಮೇಣ ಭೀಕರವಾಗಿ, ಮನಸಿನಲ್ಲಿ ಮೊಳಕೆಯೊಡೆಯುತ್ತಿದ್ದ ಕಲಾಕೃತಿಯನ್ನು ಕೆಡಿಸಿತ್ತು.
"Hello, Am I Audible? ಮ್ಯಾನೇಜರ್ ನ ಕರೆಗೆ ಉತ್ತರಿಸುತ್ತಾ ಬದುಕು ವಾಸ್ತವದತ್ತ ಮುಖ ಮಾಡಿತು.😐
Tuesday, May 24, 2022
#ನನ್ನದಲ್ಲದ ಪ್ರಪಂಚದಲ್ಲಿ ಬದುಕುತ್ತಿದ್ದೇನೆ..!
Sunday, July 18, 2021
#ಸ್ಮಶಾನ ವೈರಾಗ್ಯ ಕ್ಷಣಿಕ...!
ಅವರು ನಮ್ಮನ್ನೆಲ್ಲ ಬಿಟ್ ಹೋಗ್ಬಿಟ್ರು ಅಂತ ಫೋನ್ ಬರುತ್ತೆ, ತಕ್ಷಣಕ್ಕೆ ಸುದ್ದಿ ಬಂದಾಗ ಶಾಕ್ ಆಗುತ್ತೆ, ಇನ್ಮುಂದೆ ಅವರು ನಮ್ ಜೊತೆಲಿ ಇರಲ್ವಲ್ಲ ಅನ್ನೊ ಕೊರಗು ಶುರುವಾಗುತ್ತೆ, ಹಿಂದೆ ಅವರ ಜೊತೆಗೆ ಬದುಕಿದ ನೆನಪುಗಳು ಹಾಗೇ ಕಣ್ಮುಂದೆ ಬರುತ್ವೆ, ಇದೆಲ್ಲದರ ಪರಿಣಾಮ ಕಣ್ಣಲ್ಲಿ ಅನಿರೀಕ್ಷಿತವಾಗಿ ನೀರು ಬಂದ್ಬಿಡುತ್ತೆ...
ಸರಿ ದೂರದ ಊರು ಬೇರೆ ಏನ್ ಮಾಡೋದು? ಎಲ್ರೂ ಒಂದ್ ಗಾಡಿ ಬುಕ್ ಮಾಡಿ ಅಥವ ಇರುವವರಲ್ಲೆ ಯಾರ್ದಾದ್ರು ಗಾಡಿ ಇದ್ರೆ ಮಣ್ಣಿಗೆ ಹೋಗ್ಬರಣ ಅಂತ ಹೊರಡ್ತಾರೆ, ಅರ್ಧ ದಾರಿಯವರೆಗೂ ಸತ್ತವರ ನೆನಪುಗಳನ್ನ ಮೆಲುಕು ಹಾಕಿ ಅಳ್ತಾರೆ, ದಾರಿ ಮಧ್ಯದಲ್ಲಿ ಹಸಿವು ಅಂತ ಹೋಟೆಲ್ನಲ್ಲಿ ಊಟ ಮಾಡಿ ನಗ್ತಾ ನಗ್ತಾ ಮಾತಾಡ್ತಾರೆ, ಊರಿಂದ ಫೋನ್ ಮೇಲೆ ಫೋನ್ ಬರುತ್ವೆ ಬೇಗ ಬನ್ನಿ ಹೆಣವನ್ನ ಸಂಜೆವರೆಗೂ ಇಟ್ಕಳಕ್ ಆಗಲ್ಲ ಅಂತ, ಇನ್ನೇನ್ ಬಂದ್ವಿ ಬಂದ್ವಿ ಅಂತಾನೇ ಮೂರ್ ಗಂಟೆ ಮಾಡ್ತಿವಿ, ಊರ್ ಬರೋವರ್ಗೂ ನಗ್ತಾ ನಗ್ತಾ ಹೋಗ್ತಿವಿ, ಊರ್ ಬಂದು ಹೆಣ ಕಂಡ ತಕ್ಷಣ ಸಹಜವಾಗಿ ಕಣ್ಣೀರು ಕಂಟ್ರೋಲ್ ಆಗೋದಿಲ್ಲ, ಅಳ್ತೀವಿ ಬೇರೆಯವರಿಗೂ ಸಮಾಧಾನ ಮಾಡ್ತಿವಿ, ಕೊನೆಗೆ ಮಣ್ಣು ಮಾಡಿ ಹೊರಡೋಕೆ ಸಿದ್ದರಾಗ್ತಿವಿ,
ಮಸಣದಿಂದ ಬಂದು ಎರಡ್ ದಿನದಲ್ಲೇ ನಾರ್ಮಲ್ ಜೀವನಕ್ಕೆ ಒಗ್ಗಿಕೊಳ್ತೀವಿ, ಮತ್ತೆ ತಿಥಿಯ ದಿನ ಹೋಗಿ ಅವರ ಫೋಟೋವನ್ನ ನೋಡಿ ಬಿಕ್ಕಿ ಬಿಕ್ಕಿ ಅಳ್ತೀವಿ, ಸಂಜೆ ಮತ್ತೆ ಎಲ್ರಿಗೂ ನಗ್ತಾ ನಗ್ತಾ ಬಾಯ್ ಹೇಳಿ ನಮ್ ನಮ್ ಊರುಗಳಿಗೆ ವಾಪಾಸ್ ಬರ್ತೀವಿ, ಸಂತೋಷದ ವಿಚಾರ ಏನಂದ್ರೆ ಸತ್ತವರು ಬದ್ಕಿದ್ದಾಗ ಅವರ ಬಗ್ಗೆ ಒಳ್ಳೇದ್ ಹೇಳಿರ್ತಿವೊ ಇಲ್ವೊ ಗೊತ್ತಿಲ್ಲ ಒಟ್ನಲ್ ಸತ್ಮೇಲಂತೂ ತಿಥಿ ಮುಗ್ಯೋವರ್ಗೂ ಅವರ ಬಗ್ಗೆ ಗುಣಗಾನ ಮಾಡ್ತಿವಿ, ತಿಂಗಳು ಕಳೆಯುವಷ್ಟರಲ್ಲಿ ನಮ್ಮಲ್ಲಿ ಒಬ್ರು ಸತ್ರು ಅನ್ನೋ ಯೋಚನೆ ಕೂಡ ನಮ್ ತಲೆಲಿ ಇರೋದಿಲ್ಲ, ಇದೆಲ್ಲ ಸಹಜವಾಗಿ ಎಲ್ಲರ ಜೀವನದಲ್ಲಿ ನಡೆಯುವಂತ ಘಟನೆ, ಸತ್ತವರ ಹೆತ್ತವರಿಗೆ ಮತ್ತು ಕಟ್ಟಿಕೊಂಡವರಿಗೆ ಬಿಟ್ರೆ ಅವರ ಸಾವಿನ ನೋವು ತುಂಬ ಜನರಿಗೆ ಹೆಚ್ಚು ದಿನ ಕಾಡೋದಿಲ್ಲ...
ಇಷ್ಟೆಲ್ಲ ಗೊತ್ತಿದ್ಮೇಲೂ ಬದುಕಿನುದ್ದಕ್ಕೂ ಮತ್ತೊಬ್ಬರನ್ನ ಮೆಚ್ಚಿಸಿ ಬದುಕೊ ಖಾಯಿಲೆ ನಮ್ಮಿಂದ ದೂರವಾಗಿಲ್ಲ, ಪ್ರಪಂಚ ಯಾವ ಹಂತಕ್ಕೆ ಮುಂದುವರೆದಿದೆ ಅಂದ್ರೆ ಒಬ್ಬರ ಫೋಟೋ ಹಾಕಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸ್ಟೇಟಸ್ ಹಾಕಿ ಐದ್ ನಿಮಿಷದ ಅಂತರದಲ್ಲೇ ಮತ್ತೊಬ್ಬರ ಫೋಟೋ ಹಾಕಿ ಹ್ಯಾಪಿ ಹುಟ್ದಬ್ಬ ಚಿನ್ನು ಅಂತ ಹಾಕುವಷ್ಟರ ಮಟ್ಟಕ್ಕೆ ಭಾವನೆಗಳು ಬೆಲೆಯನ್ನ ಕಳ್ಕೊಂಡಿವೆ, ನಾಳೆ ನಮ್ಮ ಸಾವುಗಳಿಗೂ ಇದೇ ರೀತಿಯ ಪ್ರತಿಕ್ರಿಯೆ ಇರುತ್ತೆ, ನಮ್ಮನ್ನ ಹಚ್ಚಿಕೊಂಡವರು ತುಸು ಹೆಚ್ಚು ನೊಂದುಕೊಳ್ಳಬಹುದು ಅನ್ನೋದ್ ಬಿಟ್ರೆ ನಾವು ಇದ್ವಿ ಅನ್ನೋದನ್ನೇ ಜನ ಮರೆತು ಜೀವನದ ಬಂಡಿಯಲ್ಲಿ ಸಾಗ್ತಾ ಇರ್ತಾರೆ, ಹಾಗಾದ್ರೆ ಜೀವನದ ಉದ್ದಕ್ಕೂ ಮತ್ಯಾರನ್ನೊ ಮೆಚ್ಚಿಸಿ ಬದ್ಕಿದ್ರಿಂದ ನಮಗೆ ಸಿಕ್ಕಿದ್ದೇನು? ಹೂಹ್ಞು ಏನೂ ಸಿಗಲ್ಲ, ಅಕಸ್ಮಾತ್ ಏನೊ ಸಿಗ್ತು ಅಂದ್ರು ಅದನ್ ಗಮನಿಸೋಕೆ ನಾವೇ ಇರಲ್ವಲ್ಲ, ಹಾಗಿದ್ಮೇಲೆ ಯಾಕ್ ಆ ಥರ ಬದುಕ್ಬೇಕು ಅನ್ನೋದೆ ಇವತ್ತಿಗೂ ಗೊಂದಲ...
ಇವತ್ತಿಗೂ ಆಶ್ಚರ್ಯ ಆಗೋದ್ ಏನಂದ್ರೆ ಬದುಕು ಎಷ್ಟು ವೇಗವಾಗಿ ಯಾಂತ್ರಿಕವಾಗುತ್ತಿದೆ ಅಂದ್ರೆ ಮನಸ್ಸಲ್ಲಿ ಹುಟ್ಟಿದ ಭಾವನೆಗಳಿಗೆ ಸಮಯವೇ ಇಲ್ಲದಂತಾಗಿದೆ, ಸತ್ತವರ ನೋವಿನ ನಡುವೆಯೂ ತಮಾಷೆಯ ಮನಸ್ಥಿತಿಯಂತೆ ವರ್ತಿಸಿ ತಕ್ಷಣಕ್ಕೆ ಮತ್ಯಾರ ಹುಟ್ದಬ್ಬಕ್ಕೆ ವಿಷ್ ಮಾಡಿ ಖುಷಿ ಪಡುವಷ್ಟು...!
Saturday, March 20, 2021
#ಮರೆಯಾಗುತಿರುವ 'ಗುಬ್ಬಿಯಂತಹ ಸಂಬಂಧಗಳು'....!
#World Sparrow Day..!
ನಾನಾ ರೀತಿಯ ಸಂಬಂಧಗಳು ನಮ್ಮ ಬದುಕಿನ ಭಾಗವಾಗಿ ಉಳಿಯುತ್ತವೆ. ಕೊನೆಯವರೆಗೂ ಜೊತೆ ಸಾಗಿದಂತವು , ಮುಗುಳು ನಗೆಯೊಡನೆ ಮುನ್ನಡೆದಂತಹವು , ಬದುಕಿನ ಎಲ್ಲ ಪಾಠಗಳನ್ನೂ ಕಂಬನಿಯಲ್ಲಿ ಬರೆಸಿ ಕಲಿಸಿದಂತವು... ಇಲ್ಲಿ ದಾಖಲಾದವು ಕೂಡ ಕಾಡುವ ಮುಖಗಳೇ ಆದರೆ ಇವುಗಳೊಂದಿಗೆ ಕೊಂಚ ಹೆಚ್ಚೆನಿಸುವಷ್ಟು ಒಡನಾಟವಿದೆ. ಬದುಕಿನ ಕೆಲ ಪಾಠಗಳನ್ನು ಕಲಿಸಿವೆ, ಕ್ಷಣಗಳಲ್ಲಿನ ಬದುಕನ್ನು ಸಂಭ್ರಮಿಸುವುದನ್ನು ಕಲಿಸಿವೆ.
ಕೆಲ ವರ್ಷಗಳ ಹಿಂದೆ ಮನೆಯ ಹೊಸ್ತಿಲಿಗೆ ಅಂಟಿಕೊಂಡು ಕುಳಿತು ಅನ್ನಕ್ಕೆ ಬೇಕಾದಷ್ಟು ಅಕ್ಕಿಯನ್ನು ದಿನವೂ ಸ್ವಚ್ಚಗೊಳಿಸುವುದು ಹೆಂಗಸರ ನಿತ್ಯ ಕ್ರಿಯೆಯಾಗಿತ್ತು . ಸಿಕ್ಕ ಒಂದೆರಡು ಭತ್ತವನ್ನು ಕಸದ ಬುಟ್ಟಿಗೆ ಹಾಕುವ ಪಧ್ಧತಿ ಇರಲಿಲ್ಲ. ಅಲ್ಲೇ ಮುಂದೆ ಎಸೆಯುತ್ತಿದ್ದರು. ಎಲ್ಲಿಂದಲೋ ಹಾರಿ ಬಂದ ಗುಬ್ಬಿ ಭತ್ತವನ್ನು ತಿಂದು ಚೀಂವ್ ಗುಟ್ಟಿ ಹಾರಿ ಹೋಗುತ್ತಿತ್ತು. ಗುಬ್ಬಿ ನಮ್ಮ ದೈನಂದಿನ ಬದುಕಿನ ಭಾಗವಾಗಿತ್ತು. ಈಗ ಹೊಸ್ತಿಲಿನ ಮುಂದೆ ಕೂರುವರಾರು ? ಅಕ್ಕಿಯಲ್ಲಿ ಭತ್ತವೆಲ್ಲಿ ? ಒಂದೊಮ್ಮೆ ಭತ್ತವನ್ನು ಕೊಂಡು ತಂದು ಹಾಕಿದರೂ ಗುಬ್ಬಿ ಎಲ್ಲಿ ? ಮುಷ್ಠಿ ರಾಗಿಯನ್ನು ದಿನವಿಡಿ ತಿನ್ನುತ್ತಿದ್ದ ಗುಬ್ಬಿಯ ಜಾಗವನ್ನು ನಿಮಿಷಾರ್ಧದಲ್ಲಿ ತಟ್ಟೆ ಧಾನ್ಯವನ್ನು ಮುಗಿಸುವ ಪಾರಿವಾಳ ಆಕ್ರಮಿಸಿಕೊಂಡಿದೆ. ಸಣ್ಣ ದನಿಯ ಸೆಣಸಲಾರದ ಗುಬ್ಬಿಗಿಲ್ಲಿ ಸ್ಥಳವಿಲ್ಲ. ನಮ್ಮ ಬದುಕಿನಿಂದಲೂ ಕೆಲವು ಗುಬ್ಬಿಗಳು ಮರೆಯಾಗಿವೆ.
ಶೆಟ್ಟರ ಅಂಗಡಿಗೆ ಹೋಗಿ ಲೋಕಾಭಿರಾಮದ ನಾಲ್ಕು ಮಾತನಾಡಿ ಸಾಮಾನು ತರುವುದು ಅದೆಷ್ಟೋ ಜನರ ದಿನಚರಿಯಾಗಿತ್ತು . ವರುಷಗಳು ಉರುಳಿದಂತೆ ಅಂಗಡಿಯವರೂ ಮನೆಯವರಂತೆ ಸಲಹೆ ಕೊಟ್ಟು ಸಹಾಯವನ್ನೂ ಮಾಡುತ್ತಿದ್ದರು. ಈಗೇನಿದ್ದರೂ ಎಲ್ಲವನ್ನೂ ಗಾಡಿಯಲ್ಲಿ ತುಂಬಿ ಕಾರ್ಡು ಉಜ್ಜೋದು ಅಥವಾ ಮನೆಯಲ್ಲೇ ಕುಳಿತು ಲ್ಯಾಪ್ಟಾಪ್, ಮೊಬೈಲ್ ಯಾವುದೋ ಒಂದನ್ನು ಬಳಸಿ ಮನೆಯ ಬಾಗಿಲಿಗೆ ಸಾಮಾನು ತರಿಸೋದು. ಇದರಿಂದ ಸಮಯ ಕೆಲ ಬಾರಿ ಹಣದ ಉಳಿತಾಯವೂ ಆಗಿದೆ ಎಂಬುದು ಒಂದು ವಾದ. ಇರಬಹುದೇನೋ. ಕಾಲನ ನಾಟಕ ರಂಗದಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ಎಷ್ಟೋ ಬಾರಿ ಸಾಧ್ಯವಾಗುವುದಿಲ್ಲ. ನಾಳೆಗಳಿಗಾಗಿ ಇಂದಿನ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇ ಬೇಕು. ಆದರೆ ನೆನ್ನೆಯ ಬಂಧಗಳು ಕಳಚಿದಾಗ ಅದರ ಭಾಗವಾಗಿದ್ದವರೆಲ್ಲರೂ ನೊಂದಿದ್ದಾರೆ, ನೋಯುತ್ತಿದ್ದಾರೆ. ಗುಬ್ಬಿ ಕಾಣೆಯಾಗಿ ಆ ಜಾಗಕ್ಕೆ ಪಾರಿವಾಳ ಬಂದು ಅದರ ಗೂ ಗೂ ಶಬ್ದ ಕೇಳುವವರೆಗೆ ನಮಗೆ ಗುಬ್ಬಿಯ ನೆನಪಾಗಲಿಲ್ಲ.. ಇಲ್ಲೇನೋ ಇತ್ತು ಅದು ಈಗಿಲ್ಲ ಎಂದು ಅರ್ಥವಾಗಲು ವರುಷಗಳೇ ಹಿಡಿದವು. ಈಗ ಬಿದಿರಲ್ಲಿ, ಮಣ್ಣಲ್ಲಿ ಗುಬ್ಬಿ ಗೂಡು ಮಾಡಿ ಬಾಲ್ಕಾನಿಯಲ್ಲಿ , ಪಾರ್ಕಿನ ಮರದಲ್ಲಿ ನೇತು ಹಾಕುತ್ತಿದ್ದೇವೆ. ಗೂಡು , ಮಾಡು ಇನ್ನುಳಿದ ವಸ್ತುಗಳನ್ನೆಲ್ಲಿಂದ ತರುವುದು ? ಹಾರಿ ಹೋದ ಗುಬ್ಬಿಗೆ ನಮ್ಮ ಕೂಗು ಕೇಳೀತೆ?
'ಗುಬ್ಬಿಯಂತಹ ಸಂಬಂಧಗಳು' ಎಂದು ಓದಿದ್ದು ಬಹುಶಃ ರವಿ ಬೆಳಗೆರೆಯವರ ಬರಹದಲ್ಲಿ. ಇಂತಹ ಬಂಧಗಳು ಎಲ್ಲರ ಬದುಕಿನಲ್ಲೂ ಇರಬಹುದು. ಕಡೆಗೆ ಏನೂ ಆಗದೇ ಉಳಿದರೂ ಕೂಡ ಆ ಹೊತ್ತಿಗೆ ಎಲ್ಲವೂ ಆದವರು. ನಮ್ಮ ನೆನ್ನೆಗಳ ಭಾಗವಾಗಿದ್ದವರು ಇಂದು ನೆನಪಾದಾಗ ಕಾಣದಾದವರು ನಾಳೆಗಳ ಭರವಸೆಗೆ ಅಗತ್ಯವಾದವರು.
- ಮತ್ತೆ ಸಿಗುವಾ ನಾಳೆಗಳ್ಳಿದ್ದರೆ
Saturday, March 13, 2021
#ಬಡಪಾಯಿ ಮನರಂಜನೆಗಳು ಬರಿ ಇಂಥವೇ..!
ಹಗಲ್ಹೋತ್ತು ಗಾಢ ನಿದ್ದೆಗಿಳಿದು ಸಂಜೆ ಆರಕ್ಕೆದ್ದು
ಇದು ಮುಂಜಾನೆಯಾ ಮುಸ್ಸಂಜೆಯಾ ಎಂಬ ಗೊಂದಲದಲ್ಲಿ
ಹಾಸಿಗೆಯಲ್ಲೇ ಕೂತು ಬಿಸಿಬಿಸಿ ಚಹಾ ಹೀರಬೇಕು.
•••
ನಸುಕಿನಲ್ಲಿ ಎದ್ದು ಯೂನಿವರ್ಸಿಟಿಯ ಅಷ್ಟೂ
ರಸ್ತೆಗಳ ಮೇಲೆ ಓಡಿ ಸುಸ್ತಾಗಿ ಬೆಳಕ್ಹರಿದ ಮೇಲೆ ರಸ್ತೆ ಬದಿಯ
ಬಂಡಿಯಲ್ಲಿ ಇಡ್ಲಿಗೆ ಚಟ್ನಿ ಜಾಸ್ತಿ ಹಾಕಿಸ್ಕೊಂಡು ತಿನ್ನಬೇಕು.
•••
ಅರ್ಧರಾತ್ರಿಲಿ ಎದ್ದು ಕಾರಲ್ಲಿ ಫುಲ್ ಸೌಂಡ್ ಇಟ್ಕೊಂಡು
ಇಷ್ಟದ ಹಾಡುಗಳನ್ನ ಕೇಳ್ತಾ ಗೊತ್ತಿರದ ದಾರಿಯಲ್ಲಿ
ಸುಮ್ಮನೆ ಹೊರಟುಬಿಡಬೇಕು.
•••
ಹೋಟೆಲ್ ಹತ್ತಿರ ದುಡ್ಡಿಗೆ ಕೈಚಾಚುವ ನತದೃಷ್ಟರಿಗೆ
ಹಣ ನೀಡುವ ಬದಲು ಒಂದು ಪ್ಲೇಟ್ ಪಲಾವ್ ಪಾರ್ಸಲ್
ಕೈಗಿಟ್ಟು ಜೊತೆಗೆ ಒಂದು ಸ್ಮೈಲ್ ಕೊಟ್ಟು ಬರಬೇಕು.
•••
ಅಮ್ಮ ದೇವಸ್ಥಾನಕ್ಕೆ ಹೋಗಿ ಬರೋದ್ರೊಳಗೆ ಮನೆಯ
ಸಿಂಕಲ್ಲಿರೋ ಪಾತ್ರೆಯೆಲ್ಲಾ ತೊಳೆದಿಟ್ಟು ಒಲೆ ಮೇಲೆ ಕಾಫಿ ಮಾಡಿಟ್ಟು
ನಂಗೇನು ಗೊತ್ತೇ ಇಲ್ಲ ಎಂಬಂತೆ ಹೊದ್ಕೊಂಡು ಮಲ್ಕೊಬೇಕು...!
- ಮತ್ತೆ ಸಿಗುವಾ ನಾಳೆಗಳ್ಳಿದ್ದರೆ
Thursday, October 22, 2020
#ನೆರಳುಗಳ ಬೆನ್ನುಹತ್ತಿ..!
ಬೆಂಗಳೂರೆಂಬೋ ಮಹಾಗರ್ಭಕ್ಕೆ ಬಂದುಸೇರಿ 6 ವರುಷಗಳು ಕಳೆದವು. ಇಲ್ಲಿಪಡೆದದ್ದು ಕಳೆದದ್ದು ಎಲ್ಲವೂ ಇದೆ. ಬದುಕಿಗೋಸ್ಕರ ನಡೆಸುವ ಹೋರಾಟವಿದೆ. ನನ್ನಂತದೇ ಸಾವಿರಕನಸುಗಳ ಪರದಾಟವನ್ನೂ ಕಂಡಿದ್ದೇನೆ. ಬದುಕೆಂದರೆ ಹೊಟ್ಟೆತುಂಬಿಸಿಕೊಳ್ಳುವ ಹೋರಾಟವಷ್ಟೇ ಅಲ್ಲವಾ? ಮನಸು, ಪ್ರೀತಿ, ಭಾವನೆ ಎಲ್ಲವೂ ನಂತರ ಅನಿಸಿದೆ. ಆದರೆ ಅದೆಷ್ಟೋ ಬಾರಿ ತರಕಾರಿ ಮಾರುವವ ಬಿಸಿಲಲ್ಲ, ಬರಗಾಲಲ್ಲಿ ಮನೆಮನೆಯ ಅಲೆಯುವುದು ಮನೆಯಲ್ಲಿ ಕಾಯುವ ಯಾರದೋ ಮೇಲಿನ ಪ್ರೀತಿಗೆ ಅಲ್ಲವಾ ಅಂತಲೂ ಎನಿಸಿದೆ.
ಇಲ್ಲಿ ಬಂದಾಗಿನಿಂದ ಪ್ರತಿ ನಿತ್ಯವೂ ಬದುಕ ಹೊಸ ಹೊಸ ಪಾಠ ಕಲಿಯುತ್ತಿದ್ದೇನೆ. ಕಾಲು ನೋಯುವಷ್ಟು ನಡೆದಿದ್ದೇನೆ. ಕಾಲು ನೋವೆಂದು ನಡೆಯಲೂ ಆಗದೇ ಮಲಗಿದ್ದೇನೆ. ಕೊಟ್ಟ ದುಡ್ಡಿಗೆ ಚಿಲ್ಲರೆ ಕೊಡದೇ ಮೋಸಮಾಡಿದವನಿಂದ ಹಿಡಿದು, ನಡೆಯಲೂ ಕಷ್ಟಪಡುವ ಯಾರೋ ಮಹಾತಾಯಿ ಅದ್ಯಾವುದೋ ದಾರಿ ತೋರಿಸಿದ್ದೂ ಇದೆ.ಕಣ್ಣುಹಾಯಿಸಿದಷ್ಟೂ ದೂರಕ್ಕೆ ಮನುಷ್ಯರೇ ಕಾಣುವ ಇಲ್ಲಿ ತೀರಾಕಾಡಿದ್ದು ಒಂಟಿತನದ ಹಸಿವು. ಯಾವಾಗಲೂ ಓಡಾಡುತ್ತಲೇ ಇರುವ ಮನುಷ್ಯ ಸಾಗುತ್ತಿರುವ ದಾರಿ ಮತ್ತು ಸೇರುವ ಗುರಿ ಮಾತ್ರ ನಿಗೂಢವೇ ಸರಿ. ಮಾತು ಬರದ ಸಾವಿರ ಮರಗಳು ಸುತ್ತ ಇದ್ದರೆ ಬರದ ಒಂಟಿತನ ಮಾತು ಬರುವ ಹತ್ತು ಜನ ಸುತ್ತ ಇದ್ದರೆ ಹೆಚ್ಚುತ್ತದೆ. ಮನುಷ್ಯ ಒಂಟಿತನವ ಕಳೆಯಲು ಸಂಬಂಧಗಳ ಕಟ್ಟಿಕೊಂಡ ಮತ್ತು ಕಟ್ಟಿಕೊಂಡ ಸಂಬಂಧಗಳಿಂದ ಒಂಟಿತನವ ಸುತ್ತಿಕೊಂಡ. ಮನುಷ್ಯ ಒಂಟಿಯಾದಷ್ಟು ಕನಸುಗಾರನಾಗುತ್ತಾನೆ. ತನ್ನ ತಾನು ಪ್ರೀತಿಸಿಕೊಂಡಷ್ಟು ಕ್ರೀಯಾಶೀಲನಾಗುತ್ತಾನೆ. ಕ್ರೀಯಾಶೀಲತೆ ಮತ್ತಷ್ಟು ಪ್ರೀತಿಸಿಕೊಳ್ಳುವಂತೆ ಮಾಡುತ್ತದೆ.
ಮಹಾನಗರಿಯಲ್ಲಿ ಮನೆ ಕಟ್ಟುವುದು, ಮನೆ ಒಡೆಯುವುದು ಎರಡು ಬಹುಸುಲಭ ಹಾಗೆಯೇ ಮನಸುಗಳನ್ನೂ.... ಆದರೆ ಮಾತು, ಮುತ್ತಷ್ಟು ಸುಲಭವಲ್ಲ ಇಲ್ಲಿ. ಮುತ್ತುಸಿಕ್ಕಷ್ಟು ಸುಲಭವಲ್ಲ ಮುತ್ತಿನಂಥ ಮಾತುಸಿಗುವುದು. ಮನಸು ಗೆಲ್ಲುವುದು ಕಷ್ಟವಲ್ಲ ಅಷ್ಟಕ್ಕೂ ಮನಸಿಗೆ ಅರ್ಥವಿಲ್ಲ. ಗೆಲುವಿಗೆ ಬೆಲೆಯಿಲ್ಲ.
ನದಿ ಹರಿಯುವಾಗ ಮಾತ್ರ ಅದಕ್ಕೆ ಅದರದ್ದೆ ಹೆಸರು. ಹಾದಿಬೀದಿಯವರೆಲ್ಲ ಅದನ್ನುಹೊಗಳಿದ್ದೆ. ಆದರೆ ಅದು ಯಾವತ್ತು ಸಾಗರನ ಸೇರಿಕೊಂಡಿತೋ ಅದರ ಅಸ್ತಿತ್ವಕ್ಕೆ ಬೆಲೆಯಿಲ್ಲ ಕಡೆಗೆ ಅದು ಸಾಗರನ ಸೇರಿದ್ದರ ಕುರುಹೂ ಇಲ್ಲ. ಮಹಾನಗರಿಯೂ ಹೀಗೆಯೇ.
ಸಾವಿರ ನದಿಗಳು ಸೇರಿಯೇ ಸಾಗರವಾಗಿದ್ದು ಆದರೆ ಒಮ್ಮೆ ಸಾಗರವ ಸೇರಿದ ಮೇಲೆ ನದಿಗೆ ಅದರ ಮೂಲ ಹರಿವಿಲ್ಲ, ಬಣ್ಣವಿಲ್ಲ ಮತ್ತು ರುಚಿಯೂ ಇಲ್ಲ. ಮೂಲ ಸ್ವಭಾವವೇ ಉಳಿಯದ ಮೇಲೆ ಅದು ನದಿಯಾಗಿ ಉಳಿಯುವುದಾದರೂ ಹೇಗೆ?
ಮಹಾನಗರಿಯೂ ಅಷ್ಟೇ, ವೇಷಭೂಷಣದಿಂದ ಹಿಡಿದು ಯೋಚಿಸುವ ರೀತಿಯನ್ನೇ ಬದಲಾಯಿಸುತ್ತದೆ. ಬದಲಾಯಿಸಿಕೊಳ್ಳಲು ಯಾರೂ ಹೇಳಿಲ್ಲ ಆದರೂ ಬದಲಾವಣೆ ಇಲ್ಲಿಯ ನಿಯಮ.
ಬದಲಾಗಿದ್ದಕ್ಕೆ ಬೇಸರವಿಲ್ಲ ಹಾಗೆಯೇ, ಅಸ್ತಿತ್ವದ ಹುಡುಕಾಟಕ್ಕೂ. ಬಾಹ್ಯ ಬದಲಾವಣೆಯೇ ಬದುಕ ಬದಲಾವಣೆಯಲ್ಲ. ಮಹಾನಗರಿ ಆಂತರಿಕ ಬದಲಾವಣೆಯನ್ನೂ ಮಾಡುತ್ತಲೇ ಇರುತ್ತದೆ.
ಸುಲಭವಿರಲಿಲ್ಲ, ಕಾಡಿನಲ್ಲಿ ಒಂಟಿಯಾಗಿ ಹರಿವಾಗ ಸಿಕ್ಕ ಹೆಸರನ್ನು ಉಳಿಸಿಕೊಳ್ಳುವುದು. ಅಲ್ಲಿದ್ದಾಗ ಮಾತ್ರ ಕಾವೇರಿ,ಗೋಧಾವರಿ,ಕಾಳಿ ಸಾಗರವ ಸೇರಿದ ಮೇಲೆ ಅದು ಸಾಗರ ಅಷ್ಟೇ. ಇಲ್ಲೂ ಅಷ್ಟೇ ಒಮ್ಮೆ ಗುಂಪ ಸೇರಿದೆಯೋ ನೀನೂ ಗುಂಪಿನ ಒಬ್ಬ ಸದಸ್ಯ ಮಾತ್ರ. ಆದರೆ ಗುಂಪಿನ ಸದಸ್ಯತ್ವವೂ ಒಂಥರ ಖುಷಿಯೇ.
ಬದಲಾವಣೆಗೆ ಹಸ್ತ ಚಾಚುವ ನಗರಿ ಬದಲಾಗಲಾರೆ ಎಂದರೆ ಅಲ್ಲೇ ಇರು ಎಂದು ಮುಂದೆ ಸಾಗುತ್ತದೆ.
ನಾನು ಎಂಬುದಕ್ಕೆ ಸಾವಿರ ಅರ್ಥ. ಕಳೆದೋದೆ ಎಂದರೆ ಶೂನ್ಯ ಭಾವ, ಬದಲಾದೆ ಎಂದರೆ ಪ್ರಗತಿಯ ಸಂಕೇತ.
ನಾನೇನೂ ಮಹಾನಗರಿಯ ದ್ವೇಷಿ ಅಲ್ಲ. ಇಲ್ಲಿ ನನ್ನ ಬದುಕಿಗೊಂದು ಸ್ವಾಭಿಮಾನ ಸಿಕ್ಕಿದೆ. ಸಂಬಳ ಬಂದ ದಿನದ ಖುಷಿಯೇ ತಿಂಗಳ ಪೂರ್ತಿ ಇರಲಾರದು ಆದರೆ ಮತ್ತೆ ಖುಷಿಪಡುವ ದಿನ ಬಂದೇ ಬರುತ್ತದೆ. ಈ ಬಕಾಸುರನಂಥ ಬೆಂಗಳೂರಲ್ಲಿ ಪ್ರತಿ ಕ್ಷಣವೂ ನನ್ನನ್ನ ಹುಡುಕಿಕೊಳ್ಳುವ ಖುಷಿಯಿದೆ. ಸೋತರು ಗೆದ್ದರೂ ನಂಗೆ ನಾನು ಸಂಪೂರ್ಣ ದಕ್ಕಿದ್ದೇನೆ. ಗೆಲುವಿನ ಅರ್ಥ ವಿಶಾಲವಾಗಿದೆ. ಇಷ್ಟಕ್ಕೂ ಬದುಕು ಮತ್ತು ಗೆಲುವು ಯಾರೋ ವ್ಯಾಖ್ಯಾನಿಸಿ ಬರೆದಿಟ್ಟ ಸಂವಿಧಾನದ ಸಾಲುಗಳಲ್ಲ.
ಪ್ರತಿದಿನಕ್ಕೂ ನಮ್ಮೊಳಗೆ ಹುಟ್ಟಿ ಹೊಸ ಅರ್ಥ ಕೊಡುವ ಕಾವ್ಯದ ಹಾಗೇ ಅಲ್ಲವಾ??
Sunday, August 16, 2020
#Dhoni..7!
ಹೈಸ್ಕೂಲು ದಿನಗಳಲ್ಲಿ ಹಳ್ಳಿಗಳಲ್ಲಿ ಟಿವಿ ಇದ್ದಿದ್ದೇ ಕೆಲವೇ ಮನೆಗಳಲ್ಲಿ. ಒನ್ ಡೇ ಮ್ಯಾಚ್ ಗಳಿರಲಿ, ಟೆಸ್ಟ್ ಮ್ಯಾಚಸ್,ಅಥವಾ ವಲ್ಡ್ ಕಪ್ ಯಾವುದೇ ಇರಲಿ ಆಗಿನ ದಿನಗಳಲ್ಲಿ ಕ್ರಿಕೆಟ್ ನೋಡುತಿದ್ದೆ #Sachin ಮತ್ತು #Dravid ಗೊಸ್ಕರ್. ಆಮೇಲೆ ಕ್ರಿಕೆಟ್ ನೋಡೋದು ಬಿಟ್ಬಿಟ್ಟೆ. ಈಗ ಆಸಕ್ತಿಯೂ ಇಲ್ಲ. ತೀರ ಇತ್ತೀಚಿನ ಆಟಗಾರರೂ ಗೊತ್ತಿಲ್ಲ. ಆದರೆ ಈ ಮಹೇಂದ್ರ ಸಿಂಗ್ ಧೋನಿ ಇಷ್ಟ ಆಗ್ತಿದ್ದಿದ್ದು ಕ್ರಿಕೆಟ್ ಗಿಂತ ಆತನ ಬಿಹೇವಿಯರ್ ಗೆ. ಎಲ್ರೂ ಗೆದ್ದು ಸೆಲೆಬ್ರೇಟ್ ಮಾಡ್ತಿದ್ರೆ ಅವರಿಗೆಲ್ಲ ಕುಪ್ಪಳಿಸಲು ಬಿಟ್ಟು ಸಣ್ಣ ನಗು ನಗ್ತಾ ಆತ ನೋಡ್ತಿದ್ದ ರೀತಿಗೆ, ಮಾತಾಡಬೇಕಾದಾಗೆಲ್ಲ ಮಾತಾಡಲೇಬೇಕು ಅಂತಿಲ್ಲ, ಮೌನ ಒಂದಿಷ್ಟು ಮಾತಾಡಲಿ ಅಂತ ಸುಮ್ಮನಾಗುವ ಆ ಮೌನಕ್ಕೆ! ಆತನ ಫ್ಯಾನ್ ಏನೂ ಅಲ್ಲ. ಒಂಥರಾ ಇಷ್ಟ.
ಈ ಧೋನಿ ರಿಟೈರ್ ಆಗ್ತಿರೋದು ನನಗೇನೂ ಅನ್ನಿಸಲೇ ಇಲ್ಲ. ಆದರೆ ನಿನ್ನೆಯಿಂದ ಮನಸ್ಸಲ್ಲಿ ಕೂತಿದ್ದು ಆತ ರಿಟೈರ್ ಮೆಂಟ್ ಘೋಷಿಸಿದ ರೀತಿ! ಮೈ ಪಲ್ ದೋ ಪಲ್ ಕಾ ಶಾಯರ್ ಹೂಂ... ಪಲ್ ದೋ ಪಲ್ ಮೇರೀ ಕಹಾನೀ ಹೈ.. ಈ ಹಾಡೇ ಮಾತಾಡುತ್ತೆ. ಅಂತಹ ಅದ್ಭುತ ಹಾಡಿಗೆ ಫೋಟೋಸ್ ಕೊಲಾಜ್ ಮಾಡಿ ಹಾಕಿದ್ದು ಕೊನೆಯಾಗೋದು ನೆಲದ ಮೇಲೆ ಮಲಗಿದ ಧೋನಿ, ಬ್ಯಾಗ್ರೌಂಡಲ್ಲಿ ಚಪ್ಪಾಳೆಯ ಸದ್ದು. ಒಂದು ಸಿಂಪಲ್ ‘Thanks’ ಜೊತೆಗೆ consider me as retired from 19:29!
ಒಂದು ಪತ್ರಿಕಾ ಗೋಷ್ಟಿ ಇಲ್ಲ, ಒಂದು ಪಾರ್ಟಿ ಇಲ್ಲ, ಒಂದು ಪೇಪರ್ ಸ್ಟೇಟ್ ಮೆಂಟಿಲ್ಲ! ಸದ್ದು ಗದ್ದಲವಿಲ್ಲದೆ,
ಅಬ್ಬರದ ಮಾತಿಲ್ಲದೆ ಹೇಳಬೇಕಾದ್ದನ್ನೆಲ್ಲ ಹೇಳಿ ಮುಗಿಸಿದರು ಧೋನಿ! 
ಧೋನಿ ಇಷ್ಟ ಆಗ್ತಾನೆ ಅಂದಿದ್ದು
ಇದಕ್ಕೇ. ಹಾಗೆ ಬದುಕೋದು ಚೆಂದ ಆದರೆ ಕಷ್ಟ! ನಾನೂ ಪ್ರಯತ್ನಿಸುತ್ತಲೇ ಇರ್ತೀನಿ. ಆದರೆ ಹಾಳಾದ identity
crisis ಬಿಡಬೇಕಲ್ಲ
ನನಗಿಷ್ಟವಾದ ಆಟಗಾರನಿಗೆ ಆಡುವ ಅವಕಾಶ ನೀಡಲಿಲ್ಲ ಅಂತಲೇ ಧೋನಿಗೆ ಬೈದಾಡುವವರು
ಇರುವ ಹನ್ನೊಂದು ಜನರ ಟೀಮಿನಲ್ಲಿ ಯಾರ್ಯಾರನ್ನ ಆಡಿಸಬೇಕು ಮಾರ್ರೆ!?
ಯಾರ್ಯಾರಿಗೋ ವಿದಾಯದ ಪಂದ್ಯ ಕೊಡಿಸಲಿಲ್ಲ ಅಂತಲೂ ಅಳುವವರಿದ್ದಾರಲ್ಲ,
ಒಂದು ಕಡೆ ಸಚಿನ್/ಸೆಹ್ವಾಗ್/ಗಂಗೂಲಿ/ಲಕ್ಷ್ಮಣ್/ದ್ರಾವಿಡರಂತಹಾ Gods of Cricketರನ್ನೂ ಸಂಭಾಳಿಸಿಕೊಂಡು,
ಇನ್ನೊಂದು ಕಡೆ ಹೊಸಪ್ರತಿಭೆಗಳನ್ನೂ ಹುಡುಕಿ, ಹೆಕ್ಕಿ, ಬೆಳೆಸಿಕೊಂಡು, ದೇಶದ ಹೆಸರುಹೊತ್ತ ಜೆರ್ಸಿಯನ್ನೂ ಹೊತ್ತು,
ಪಂದ್ಯಗಳನ್ನು ಕಪ್ಪುಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಅದರಲ್ಲೂ ಪಾಕಿಸ್ಥಾನ-ಭಾರತಗಳಂತಹಾ ಭಾವನಾತ್ಮಕ
ದೇಶಗಳಲ್ಲಂತೂ ಹತ್ತು ಪಟ್ಟು ಕಠಿಣ.
ಪ್ರತೀ ನಾಯಕನಿಗೂ ಅವನದ್ದೇ ಆದ ಹತ್ತಿರದ ಮತ್ತು ದೂರಗಾಮಿ ಗುರಿಯಿರುತ್ತದೆ. ಅದನ್ನು ತಲುಪುವ ಆ ಜರ್ನಿ
ಗೇಮ್ ಆಫ್ ಥ್ರೋನ್ಸ್’ನ ಖಲೀಸೀಯ ಪ್ರಯಾಣದಂತದ್ದು. ಕೆಲವು ಸುಲಭದ, ಕೆಲವು ಕಷ್ಟದ ನಿರ್ಧಾರಗಳು
ಎದುರಾಗೇ ಆಗುತ್ತವೆ. ಎಷ್ಟೋ ಬಾರಿ ತಮಗಿಷ್ಟವಾದದ್ದನ್ನೇ ಕಳೆದುಕೊಳ್ಳಬೇಕಾಗುತ್ತದೆ, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ
ಬಿಟ್ಟೇ ನಡೆಯಬೇಕಾಗುತ್ತದೆ, ಇನ್ನು ಕೆಲವೊಮ್ಮೆ ಬಲಿಯೂ ಕೊಡಬೇಕಾಗಿಬರುತ್ತದೆ. It’s a part of the journey.
ಸದಾ ನೀರಿಗೆ ಅಂಟಿಕೊಂಡೇ ಇದ್ದರೂ ಯಾವತ್ತೂ ಅಂಟಿಕೊಳ್ಳದ ತಾವರೆಲೆಯಂತಹಾ ಸ್ಥಿತಪ್ರಜ್ಞತೆ, ಎಲ್ಲವನ್ನೂ
ಅಳೆದುತೂಗಿ ನಿರ್ಧರಿಸುವ ಯುಧಿಷ್ಟಿರನ ಸ್ಥಿರತೆ, ಪಾರ್ಥನಿಗೆ ಮಾತ್ರ ಹೆಚ್ಚು ಸಹಾಯಮಾಡಿ ನಮ್ಮನ್ನೆಲ್ಲಾ ಕಡೆಗಣಿಸಿದೆ
ಎಂದು ಬೈಸಿಕೊಂಡರೂ ನಕ್ಕು ಮತ್ತೆ ಅವರೊಂದಿಗೇ ಜೊತೆಗೇ ನಿಲ್ಲುವ ಕೃಷ್ಣನ ಆಳ......ಇವು ಎಲ್ಲರಿಗೂ ಕೂಡಿಬರಲ್ಲ.
ಹಾಗೆ ಕೂಡಿಬಂದವರನ್ನು ಜಗತ್ತು ಅರ್ಥೈಸಿಕೊಳ್ಳಲೂ ಸಾಧ್ಯವಿಲ್ಲ.
ಒಂದು ತಿಳಿದಿರಿ....ಅವನು ನಡೆದ ಹಾದಿ, ಅವನಿಗಿದ್ದ ಸವಾಲುಗಳು, ಅವನಿಗಿದ್ದ ಕಷ್ಟಗಳು ಅವನಿಗೆ ಮಾತ್ರ ಗೊತ್ತಿರಲು
ಸಾಧ್ಯ. ಅವಕ್ಕೆ ತಕ್ಕ ಪರಿಹಾರಗಳೂ ಅವನಿಗೆ ಮಾತ್ರ ಗೊತ್ತಿರಲು ಸಾಧ್ಯ. ನಾನು-ನೀವು ಬರೀ ಮಾತನಾಡಬಹುದಷ್ಟೇ.
ಬೇರೇನೂ ಮಾಡಲಾಗುವುದಿಲ್ಲ. ಮಾತನಾಡಲು ಯಾರಿಗೂ 144 ಸೆಕ್ಷನ್ನಿಲ್ಲ. ಎಷ್ಟು ಬೇಕಾದರೂ ಆಡಿ. ಆದರೆ ಅವು
ಬರೀ ಮಾತುಗಳಾಗಿರುತ್ತವೆಯೇ ಹೊರತು, ಅದರಿಂದ ನಯಾಪೈಸೆ ಪ್ರಯೋಜನ ನಿಮಗಾಗಲೀ, ನಿಮಾಮನೆಚ್ಚಿನ
ಆಟಗಾರರಿಗಾಗಲೀ, ಅವನಿಗಾಗಲೀ ಇರಲ್ಲ. ಯಾಕೆಂದರೆ ಅವು ಬರೀ ಹುಚ್ಚುಮನಸ್ಸಿನ ಹದಿನಾರು ಬಡಬಡಿಕೆಗಳಷ್ಟೇ.
You can sulk as much as you want.
There were many greats before you.
There will definitely be many greats after you.
But you will remain my true captain.
Keep inspiring many more.
Love you always MSD.
Tuesday, August 11, 2020
#ಬೆಂಗಳೂರು..its just not a city...its an Emotion..!
ಬೆಳಿಗ್ಗೆ ಬೇಗ ಬೆಂಗಳೂರು ತಲುಪಿ ಸ್ನಾನ ಮಾಡಿ ಫ್ರೆಶ್ ಆಗಿ ಆಫೀಸಿಗೆ ಹೋಗಬೇಕು..!! ನಸುಕಿನ ನಿದ್ದೆಗಣ್ಣಲಿ ಕ್ಲೀನರ್ "ಇಲ್ಲಿ
ಯಾರಾದ್ರೂ ಇಳೀತೀರಾ?" ಅಂದಾಗ ಗಾಬರಿಯಾಗಿ ಎದ್ದು ಕಣ್ಣುಜ್ಜಿಕೊಂಡು ಕಿಟಕಿಯ ಪರದೆ ಸರಿಸೆ ಹೊರಗೆ ಇಣುಕಿ ಸಮಾಧಾನ
ಪಟ್ಟುಕೊಳ್ಳುವುದು..!! ಟೈಮ್ ನೋಡಲು ಫೋನ್ ಹೊರತಗೆದಾಗ "ರಾತ್ರಿ ಊಟ ಮಾಡಿದೆಯಾ !? ನಿದ್ದೆ ಆಯ್ತಾ !? ಬೆಂಗಳೂರು
ತಲುಪಿದೆಯಾ!?" ಅಂತ ವಿಚಾರಿಸಲು ಮನೆಯಿಂದ ಬಂದಿರುವು ೪-೫ ಮಿಸ್ ಕಾಲ್ ಗಳು..!! ತಣ್ಣನೆ ಗಾಳಿಗಂಜಿ ಮುಚ್ಚಿದ ಗಾಜಿನ
ಕಿಟಕಿಯ ಹೊರಗೆ ಕಾಣುವ ಹಾಲಿನ ವಾಹನ, ತರಕಾರಿ ವಾಹನಗಳು..!! ಮಧ್ಯೆ ಮಧ್ಯೆ ನೆಲಮಂಗಲ, ಎಂಟನೇ ಮೈಲಿ, ಪೀಣ್ಯ,
ಗುರಗುಂಟೇಪಾಳ್ಯ, ಯಶವಂತಪುರ, ಗೋವರ್ಧನ್ ಥಿಯೇಟರ್, ರಾಜಾಜಿನಗರ ಅಂತ ಬಸ್ ನಿಲ್ಲಿಸಿ ಲಗೇಜ್ ಇಳಿಸಿಕೊಂಡು
ತಮ್ಮ ತಮ್ಮ ಮನೆಗಳ ಕಡೆ ಹೆಜ್ಜೆ ಹಾಕೋ ಜನರು..!! ಬಸ್ ನಿಲ್ಧುತ್ತಿದ್ದಂತೆ ಡೋರ್ ಬಳಿ ಬಂದು ಗುಂಪುಗಟ್ಟಿ ಸರ್ ಆಟೋ ಬೇಕಾ ?
ಎಲ್ಲಿಗ್ ಹೋಗ್ಬೇಕು !? ಅಂತ ಕೇಳೋ ಆಟೋ ಡ್ರೈವರ್ ಗಳು..!! ಹೆಣಭಾರ ಲಗೇಜ್ ಹೊತ್ತುಕೊಂಡು ಆನಂದ್ ರಾವ್ ಸರ್ಕಲ್
ಇಂದ ಮೆಜೆಸ್ಟಿಕ್ ಬಸ್ ನಿಲ್ದಾಣದ ಫ್ಲೈ ಓವರ್ ಹತ್ತಿಳಿದು ಪ್ಲಾಟ್ಫಾರ್ಮ್ ತಲುಪಿ BMTC ಬಸ್, Metro ರೈಲಿಗಾಗಿ ಗಾಗಿ ಕಾಯೋ
ಜನರು..!! ಸೂರ್ಯ ದಿನವನ್ನು ಶುರುಮಾಡುತ್ತಿದ್ದಂತೆ ರಸ್ತೆ ಬದಿಯ ಟೀ ಅಂಗಡಿ, ಹೋಟೇಲ್ ಗಳು ಆಕ್ಟೀವ್ ಆಗುತ್ತಿರುವುದು..!!
ವ್ಯಾಪಾರ ಶುರು ಮಾಡಲು ಅಂಗಡಿಗಳ ಮುಂದೆ ಕಸ ಗುಡಿಸಿ ನೀರು ಹಾಕಿ ಹೊಸ ದಿನವನ್ನು ಶುರುಮಾಡಲು ಕಾಯುತ್ತಿರುವ ಮಾಲಿ
ಕರು...!! ಒಂದಾ ಎರಡಾ !? ದೂರದೂರಿನಿಂದ ಬೆಂಗಳೂರಿಗೆ ದುಡಿಯಲು ಬಂದವರ ಈ ಸುಂದರ ಅನುಭವಗಳು...ಇದು ಕೇವಲ
ಒಂದು ಮುಂಜಾವಿನಲಿ ನೋಡಬಹುದಾದ ಕೆಲವೇ ಕೆಲವು ಚಿತ್ರಣಗಳು. ವಿಶೇಷವಾಗಿ ಉತ್ತರ ಕರ್ನಾಟಕದ ಜನರಿಗೆ ಬೇಗ ಕನೆಕ್ಟ್
ಆಗೋ ವಿಷಯಗಳಿವು. "ಬೆಂಗಳೂರು" ಅನ್ನೋದು ಜೀವನದಲ್ಲಿ ತುಂಬಾ ಸಿಹಿಯಾದ ನೆನಪುಗಳನ್ನು, ಜೀವನಕ್ಕೆ ಬೇಕಾದ ಪಾಠಗಳ
ನ್ನು ಕಲಿಸಿದೆ....ಕಲಿಸುತ್ತಿದೆ!!
Monday, July 27, 2020
#ನಾವು ಊರು ಬಿಟ್ಟವರು..!
ನನಗೇನು ಕೊಟ್ಟೆಯೆಂದು ಸವಾಲು ಹಾಕುತ್ತಾನೆ. ಅಲ್ಲಿ ದೂರದ ಶಹರದಲ್ಲಿ ಒಂಟಿಯಾಗಿ ಕುಳಿತು ಇವರೆಲ್ಲರೂ ನನ್ನವರು, ನನ್ನವರು
ಎಂದು ಸುಳ್ಳು ಹೆಮ್ಮೆಯಲ್ಲಿ ಬದುಕುತ್ತೇವೆ ಏಕೆಂದರೆ...
ಇದು ಬೇರೆ ಏನು ಅಲ್ಲಾ Tax-Terrorism..💯
ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...
-
#96 10 ಸಲ ನೋಡಿದ್ರೂ ಮೊದಲನೇ ಸಲ ನೋಡಿದಂತೇ feelu.... ಈ ನೇ ಬಾರಿ ನೋಡಿದಮೇಲೆ ನನ್ನ ಕೈಗಳು ನನ್ನ ಮಾತನ್ನು ಕೇಳಲಿಲ್ಲ One of...
-
ಅವರು ನಮ್ಮನ್ನೆಲ್ಲ ಬಿಟ್ ಹೋಗ್ಬಿಟ್ರು ಅಂತ ಫೋನ್ ಬರುತ್ತೆ, ತಕ್ಷಣಕ್ಕೆ ಸುದ್ದಿ ಬಂದಾಗ ಶಾಕ್ ಆಗುತ್ತೆ, ಇನ್ಮುಂದೆ ಅವರು ನಮ್ ಜೊತೆಲಿ ಇರಲ್ವಲ್ಲ ಅನ್ನೊ ಕೊರಗು ಶುರುವಾ...

.jpg)






