ನಾನಾ ರೀತಿಯ ಸಂಬಂಧಗಳು ನಮ್ಮ ಬದುಕಿನ ಭಾಗವಾಗಿ ಉಳಿಯುತ್ತವೆ. ಕೊನೆಯವರೆಗೂ ಜೊತೆ ಸಾಗಿದಂತವು ,ಮುಗುಳು ನಗೆಯೊಡನೆ ಮುನ್ನಡೆದಂತಹವು , ಬದುಕಿನ ಎಲ್ಲ ಪಾಠಗಳನ್ನೂ ಕಂಬನಿಯಲ್ಲಿ ಬರೆಸಿ ಕಲಿಸಿದಂತವು... ಇಲ್ಲಿ ದಾಖಲಾದವು ಕೂಡ ಕಾಡುವ ಮುಖಗಳೇ ಆದರೆ ಇವುಗಳೊಂದಿಗೆ ಕೊಂಚ ಹೆಚ್ಚೆನಿಸುವಷ್ಟು ಒಡನಾಟವಿದೆ. ಬದುಕಿನ ಕೆಲ ಪಾಠಗಳನ್ನು ಕಲಿಸಿವೆ, ಕ್ಷಣಗಳಲ್ಲಿನ ಬದುಕನ್ನು ಸಂಭ್ರಮಿಸುವುದನ್ನು ಕಲಿಸಿವೆ.
ಕೆಲ ವರ್ಷಗಳ ಹಿಂದೆ ಮನೆಯ ಹೊಸ್ತಿಲಿಗೆ ಅಂಟಿಕೊಂಡು ಕುಳಿತು ಅನ್ನಕ್ಕೆ ಬೇಕಾದಷ್ಟು ಅಕ್ಕಿಯನ್ನು ದಿನವೂ ಸ್ವಚ್ಚಗೊಳಿಸುವುದು ಹೆಂಗಸರ ನಿತ್ಯ ಕ್ರಿಯೆಯಾಗಿತ್ತು . ಸಿಕ್ಕ ಒಂದೆರಡು ಭತ್ತವನ್ನು ಕಸದ ಬುಟ್ಟಿಗೆ ಹಾಕುವ ಪಧ್ಧತಿ ಇರಲಿಲ್ಲ. ಅಲ್ಲೇ ಮುಂದೆ ಎಸೆಯುತ್ತಿದ್ದರು. ಎಲ್ಲಿಂದಲೋ ಹಾರಿ ಬಂದ ಗುಬ್ಬಿ ಭತ್ತವನ್ನು ತಿಂದು ಚೀಂವ್ ಗುಟ್ಟಿ ಹಾರಿ ಹೋಗುತ್ತಿತ್ತು. ಗುಬ್ಬಿ ನಮ್ಮ ದೈನಂದಿನ ಬದುಕಿನ ಭಾಗವಾಗಿತ್ತು. ಈಗ ಹೊಸ್ತಿಲಿನ ಮುಂದೆ ಕೂರುವರಾರು ? ಅಕ್ಕಿಯಲ್ಲಿ ಭತ್ತವೆಲ್ಲಿ ? ಒಂದೊಮ್ಮೆ ಭತ್ತವನ್ನು ಕೊಂಡು ತಂದು ಹಾಕಿದರೂ ಗುಬ್ಬಿ ಎಲ್ಲಿ ? ಮುಷ್ಠಿ ರಾಗಿಯನ್ನು ದಿನವಿಡಿ ತಿನ್ನುತ್ತಿದ್ದ ಗುಬ್ಬಿಯ ಜಾಗವನ್ನು ನಿಮಿಷಾರ್ಧದಲ್ಲಿ ತಟ್ಟೆ ಧಾನ್ಯವನ್ನು ಮುಗಿಸುವ ಪಾರಿವಾಳ ಆಕ್ರಮಿಸಿಕೊಂಡಿದೆ. ಸಣ್ಣ ದನಿಯ ಸೆಣಸಲಾರದ ಗುಬ್ಬಿಗಿಲ್ಲಿ ಸ್ಥಳವಿಲ್ಲ. ನಮ್ಮ ಬದುಕಿನಿಂದಲೂ ಕೆಲವು ಗುಬ್ಬಿಗಳು ಮರೆಯಾಗಿವೆ.
ಶೆಟ್ಟರ ಅಂಗಡಿಗೆ ಹೋಗಿ ಲೋಕಾಭಿರಾಮದ ನಾಲ್ಕು ಮಾತನಾಡಿ ಸಾಮಾನು ತರುವುದು ಅದೆಷ್ಟೋ ಜನರ ದಿನಚರಿಯಾಗಿತ್ತು . ವರುಷಗಳು ಉರುಳಿದಂತೆ ಅಂಗಡಿಯವರೂ ಮನೆಯವರಂತೆ ಸಲಹೆ ಕೊಟ್ಟು ಸಹಾಯವನ್ನೂ ಮಾಡುತ್ತಿದ್ದರು. ಈಗೇನಿದ್ದರೂ ಎಲ್ಲವನ್ನೂ ಗಾಡಿಯಲ್ಲಿ ತುಂಬಿ ಕಾರ್ಡು ಉಜ್ಜೋದು ಅಥವಾ ಮನೆಯಲ್ಲೇ ಕುಳಿತು ಲ್ಯಾಪ್ಟಾಪ್, ಮೊಬೈಲ್ ಯಾವುದೋ ಒಂದನ್ನು ಬಳಸಿ ಮನೆಯ ಬಾಗಿಲಿಗೆ ಸಾಮಾನು ತರಿಸೋದು. ಇದರಿಂದ ಸಮಯ ಕೆಲ ಬಾರಿ ಹಣದ ಉಳಿತಾಯವೂ ಆಗಿದೆ ಎಂಬುದು ಒಂದು ವಾದ. ಇರಬಹುದೇನೋ. ಕಾಲನ ನಾಟಕ ರಂಗದಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ಎಷ್ಟೋ ಬಾರಿ ಸಾಧ್ಯವಾಗುವುದಿಲ್ಲ. ನಾಳೆಗಳಿಗಾಗಿ ಇಂದಿನ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇ ಬೇಕು. ಆದರೆ ನೆನ್ನೆಯ ಬಂಧಗಳು ಕಳಚಿದಾಗ ಅದರ ಭಾಗವಾಗಿದ್ದವರೆಲ್ಲರೂ ನೊಂದಿದ್ದಾರೆ, ನೋಯುತ್ತಿದ್ದಾರೆ. ಗುಬ್ಬಿ ಕಾಣೆಯಾಗಿ ಆ ಜಾಗಕ್ಕೆ ಪಾರಿವಾಳ ಬಂದು ಅದರ ಗೂ ಗೂ ಶಬ್ದ ಕೇಳುವವರೆಗೆ ನಮಗೆ ಗುಬ್ಬಿಯ ನೆನಪಾಗಲಿಲ್ಲ.. ಇಲ್ಲೇನೋ ಇತ್ತು ಅದು ಈಗಿಲ್ಲ ಎಂದು ಅರ್ಥವಾಗಲು ವರುಷಗಳೇ ಹಿಡಿದವು. ಈಗ ಬಿದಿರಲ್ಲಿ, ಮಣ್ಣಲ್ಲಿ ಗುಬ್ಬಿ ಗೂಡು ಮಾಡಿ ಬಾಲ್ಕಾನಿಯಲ್ಲಿ , ಪಾರ್ಕಿನ ಮರದಲ್ಲಿ ನೇತು ಹಾಕುತ್ತಿದ್ದೇವೆ. ಗೂಡು , ಮಾಡು ಇನ್ನುಳಿದ ವಸ್ತುಗಳನ್ನೆಲ್ಲಿಂದ ತರುವುದು ? ಹಾರಿ ಹೋದ ಗುಬ್ಬಿಗೆ ನಮ್ಮ ಕೂಗು ಕೇಳೀತೆ?
'ಗುಬ್ಬಿಯಂತಹ ಸಂಬಂಧಗಳು' ಎಂದು ಓದಿದ್ದು ಬಹುಶಃ ರವಿ ಬೆಳಗೆರೆಯವರ ಬರಹದಲ್ಲಿ. ಇಂತಹ ಬಂಧಗಳು ಎಲ್ಲರ ಬದುಕಿನಲ್ಲೂ ಇರಬಹುದು. ಕಡೆಗೆ ಏನೂ ಆಗದೇ ಉಳಿದರೂ ಕೂಡ ಆ ಹೊತ್ತಿಗೆ ಎಲ್ಲವೂ ಆದವರು. ನಮ್ಮ ನೆನ್ನೆಗಳ ಭಾಗವಾಗಿದ್ದವರು ಇಂದು ನೆನಪಾದಾಗ ಕಾಣದಾದವರು ನಾಳೆಗಳ ಭರವಸೆಗೆ ಅಗತ್ಯವಾದವರು....!!💯
No comments:
Post a Comment