Sunday, March 3, 2019

#ಜಾನೇ_ಕಹಾಂ_ಗಯೇ_ಓ_ದಿನ್..!


 ಗಗನಚುಂಬಿ ಕಟ್ಟಡದೆದೆಯೊಳಗೆ ಹೈಪರ್ ಮಾರ್ಕೇಟ್ ನ ನಡುವೆ ಸಾಗುವಾಗ ಮನದಲ್ಲಿ ಹಳೆಯ ನೆನಪುಗಳು ಚುರುಗುಟ್ಟಿದವು. ಹೈಪರ್ ಮಾರ್ಕೆಟ್ ನ ಒಳಗೆ ಸಾಗುವಾಗ ಮನಸು ಮಾತ್ರ ನಾ ಬಾಲ್ಯದಿಂದ ಕಂಡ ವಾರದ ಶನಿವಾರಸಂತೆಯ ನೆನಪಿನತ್ತ ನೆಗೆಯುತ್ತಿತ್ತು. ನಿಜಕ್ಕೂ ಆಗೆಲ್ಲಾ ಸಂತೆಗೆ ಹೋಗುವುದೆಂದರೆ ನಮಗೊಂದು ಕಿರುಪ್ರವಾಸವಿದ್ದಂತೆ. ಮನೆಯವರು ಪ್ರತಿವಾರ ಸಂತೆಗೆ ಹೋಗುತ್ತಿದ್ದರು ನನಗೆ ಆ ಭಾಗ್ಯ ಮೂರ್ನಾಲ್ಕು ತಿಂಗಳಿಗೊಮ್ಮೆ ಸಿಗುತ್ತಿತ್ತು. ಈ ಸಂತೆಗಳೆ ಹಾಗೆ. ಬಹುಶಃ ಸುತ್ತಮುತ್ತಲ ಊರುಗಳಲ್ಲಿ ದೊಡ್ಡ ಸಂತೆಗಳಿವು. ಹತ್ತೂರಿಗೆ ವಾರದ ದಿನವೊಂದರಲ್ಲಿ ಒಂದೇ ಸೂರಾಗುತ್ತಿದ್ದ ಸಂತೆಗಳಿವು. ವಾರವಿಡಿ ತೋಟ,ಗದ್ದೆಗಳಲ್ಲಿ ಶ್ರಮಿಸಿ ರೈತರು, ಕಾರ್ಮಿಕರು ಸುರಿಸಿದ ಬೆವರು ಸಂಭ್ರಮಿಸುವ ತವರಿನಂತ ಸಂತೆಗಳಿವು. ಆಗೆಲ್ಲಾ ನಮ್ಮ ಮನೆಗಳಲ್ಲಿ ವಾರಕ್ಕೊಮ್ಮೆಯೇ ಮೀನು ಮಾಂಸದ ವಿಶೇಷ. ಅದು ಸಂತೆಯ ದಿನವೇ. ನಾವೂ ಸದಾ ಕಾಯುತ್ತಿದ್ದದ್ದು ಕಡ್ಲೆಪುರಿಗಾಗಿ. ತರಕಾರಿ ತರುವ ವ್ಯಾಪಾರಸ್ಥರಿಗೆ ಮಾರುವ ತವಕ, ಜನರಿಗೆ ಕೊಳ್ಳುವ ತವಕ. ನಡುವೆ ಎಷ್ಟೋಂದು ಚೌಕಾಸಿ. ಹೆಚ್ಚು ಕಡಿಮೆ ನೂರು , ನೂರೈವತ್ತು ರೂಪಾಯಿಗೆ ಇಡೀ ವಾರದ ಸಂತೆಯು ಮುಗಿಯುತ್ತಿತ್ತು. ಮನೆಗೆ ಬರುವಾಗ ಬಸ್ಸುಗಳಲ್ಲಿ ನುಗ್ಗಿ ಸೀಟು ಹಿಡಿದಾಗ ಮಹಾನ್ ಯುದ್ದ ಗೆದ್ದಷ್ಟೆ ಬೀಗುತ್ತಿದ್ದೆವು., ದಿನ ಶಾಲೆಗೆ ಪೇಟೆಗೆ ಹೋಗುವ ಇಂದಿನ ಮಕ್ಕಳಿಗೆ ಸಂತೆಯ ಸಂಭ್ರಮ ಸಿಗುವುದಿಲ್ಲಾ. ಬೆಲ್ಲಕ್ಕೆ ಇರವೆ ಮುತ್ತಿದಂತೆ ಗಿಜಿಗುಡುತ್ತಿದ್ದ ಶನಿವಾರಸಂತೆಯ ಸಂತೆಗಳಲ್ಲಿ ಮೊದಲಿನ ಕಳೆ ಹಾಗೂ ಸಂಭ್ರಮ ಕಡಿಮೆಯಾಗಿದೆ. ಅಭಿವೃದ್ದಿಯ ಚಕ್ರದ ಕಾಲಡಿಯಲ್ಲಿ ಕೆಲವೊಂದು ಸಂಭ್ರಮಗಳು ನಮಗರಿವಿಲ್ಲದಂತೆ ಕಳೆದುಹೊಗಿವೆ. ಕಡ್ಲೆ ಪುರಿಯ ಜಾಗದಲ್ಲಿ ಬೇಕರಿ ತಿಂಡಿಗಳು, ಐಸ್ ಕ್ರಿಂ, ಜ್ಯೂಸ್ಗಳು ಏನೇನೋ ಬಂದಿವೆ. ಅಧುನಿಕತೆಯ ಓಟದಲ್ಲಿ ಬದುಕು ಮುಂದಕ್ಕೆ ಓಡುವಾಗ ಮನಸ್ಸು ಮಾತ್ರ ಕಳೆದ ದಿನಗಳ ಹುಡುಕುತ್ತಾ ಹಿಂದಕ್ಕೆ ಓಡುತ್ತಿದೆ.

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...