ಅವತ್ತೊಂದಿನ ಮಹಾನಗರದ ಅತಿ ಜನಜಂಗುಳಿ ವಾಸಿಸುವ ಪ್ರದೇಶದಲ್ಲಿ ನಡು ರಾತ್ರಿ, ಆ ಮನೆಯ ಬಾಲ್ಕನಿಯಿಂದ ಇಣುಕಿ ನೋಡಿದಾಗ ಸ್ಮಶಾನಕ್ಕೆ ಇಣುಕಿದಂತಾಗಿತ್ತು. ಆ ಕಿರಿದಾದ ಓಣಿಯ ಢಾಳು ಬೆಳಕಿನ ಬೀದಿದೀಪದ ಅಡಿಯಲ್ಲಿ ಒತ್ತೊತ್ತಾಗಿ ನಿಂತಿದ್ದ ಹತ್ತಾರು ಬೈಕುಗಳು ಸಾಲಾಗಿ ಜೋಡಿಸಿಟ್ಟ ಹೆಣಗಳಂತೆ ಕಂಡವು. ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಅಚ್ಚುಕಟ್ಟಿನ ಸಿಮೆಂಟು ನೆಲ, ಒಂದೇ ಒಂದು ಗಿಡವಿಲ್ಲ, ಗಾಳಿಯಿಲ್ಲ. ನಂಗೆ ಉಸಿರು ಕಟ್ಟಿದಂತಾಯಿತು, ತಲೆ ತಿರುಗಿದ್ದು ಭಯಕ್ಕೋ ಆಗಲೇ ತಲೆಗೇರಿದ್ದ ನಶೆಗೋ ತಿಳಿಯಲಿಲ್ಲ.
ಬಯಸಿದ ಬಾಗಿಲು ತೆರೆಯುವ ಮಾಯಾನಗರಿಗೆ ಊರು ಬಿಟ್ಟು ಬಂದವರಲ್ಲಿ ನಾನು ಒಬ್ಬ. ಇಲ್ಲಿ ಹಗಲೂ ಇಲ್ಲ, ರಾತ್ರಿಯೂ ಇಲ್ಲ. ಪಾಳಿಯ ಮೇಲೆ ದುಡಿತ, ಚಲಿಸುವ ಗಾಡಿಗೆ ಬಿಡುವಿಲ್ಲ. ಇಲ್ಲಿ ಕತ್ತಲೆ ಸಿಗುವುದಿಲ್ಲ. ಬೆಳಕಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಎರಡನೇ ಪಾಳಿಯಲ್ಲಿ ದುಡಿದು ನಡುರಾತ್ರಿ ಮನೆಗೆ ಮರಳುತ್ತಿರುವವನಿಗೆ ಬೆಳಕಿನದೇ ಕಾಟ, ಹಾದಿಗುಂಟ ಸಾಲು ಸಾಲು ಬೀದಿದೀಪ. ಭರ್ರೆಂದು ಓಡುವ ವಾಹನಗಳು, ಜಗಮಗಿಸುವ ಜಾಹಿರಾತು ಬವಳಿ ಬಂದಿದ್ದು ಸುಸ್ತಿಗೋ, ಭಯಕ್ಕೋ ತಿಳಿಯಲಿಲ್ಲ.
ನಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಕಾಡುತ್ತಿದೆ. ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲ. ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಬೇಕಿದೆ . ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು, ಮಾರತಹಳ್ಳಿಯ ಮಾಲುಗಳು, ಎಂ.ಜಿ. ರೋಡಿನ ಬೀದಿಗಳು, ಕಡೆಗೆ ತಾನು ವಾಸಿಸುವ ಅಪಾರ್ಟ್ಮೆಂಟ್ ಗಳಲ್ಲಿ ಕತ್ತಲೆಯನ್ನು ಹುಡುಕಿಕೊಂಡು ಅಲೆದಿದ್ದು ಸಾಕಾಗಿದೆ. ನನ್ನದಲ್ಲದ ಪ್ರಪಂಚದಲ್ಲಿ ಬದುಕುತ್ತಿದ್ದೇನೆ ಅನ್ನಿಸೋಕೆ ಶುರು ಆಗಿದೆ.
ಊರನ್ನು ನಾನು ತೊರೆದಿಲ್ಲ ಊರು ತನ್ನೊಳಗೆ ತಾನಿದ್ದಲ್ಲೇ ಇದೆ ಎಂದೆನಿಸಿ ನಿರಾಳವಾಗುತ್ತದೆ . ಮಹಾನಗರದಲ್ಲಿ ಅಪರೂಪಕ್ಕೆ ಕಾವನೆರಳು ಸಿಕ್ಕಾಗಲೊಮ್ಮೊಮ್ಮೆ ಕನಸುಗಳಿಗೆ ಕಾವು ಸಿಗುತ್ತದೆ. ಮತ್ತೊಂದು ಕನಸು ಹುಟ್ಟುತ್ತದೆ. ಅದು ಮತ್ತೆ ಊರಿಗೆ ಮರಳುವ ಕನಸಾ ? ನನಗು ತಿಳಿದಿಲ್ಲ...!
-ಮತ್ತೆ ಸಿಗುವಾ ನಾಳೆಗಳ್ಳಿದ್ದರೆ


No comments:
Post a Comment