ಸಚಿನ್ ತೆಂಡೂಲ್ಕರ್ ಅವನೇನು ದೊಡ್ಡ ಗ್ರೇಟಾ.? ಅವನು ಆಡಿದಾಗ ಇಂಡಿಯಾ ಸೋತಿದ್ದೇ ಜಾಸ್ತಿ...
ರಜಿನಿಕಾಂತ್ ಏನ್ ದೊಡ್ಡ ಸಾಧನೆನಾ..? ಕೋತಿ ಮೊಗದವನನ್ನ ತಮಿಳರು ಮಾತ್ರ ನೋಡಬೇಕು...
ಅಮಿತಾಬ್ ಬಚ್ಚನ್ ಸಾಧನೆ ಏನಿದೆ..? ಆಕ್ಟರ್ ಆಗೋದು ದೊಡ್ಡ ಸಾಧನೆನೇ ಅಲ್ಲ....
.
.
ಬಹುಶ: ಅದು ಹದಿನೈದು ಹದಿನಾರರ ವಯಸ್ಸಿನ ಕಾಲ ನನಗೆ.ಹೀಗಿರುತ್ತಿತ್ತು ನನ್ನ ಮಾತಿನ ಧಾಟಿ.ವಿನಾಕಾರಣ ಸಾಧಕರನ್ನು ದೂಷಿಸುವ ,ತೆಗಳುವ,ಅವರ ಸಾಧನೆಯಲ್ಲೊಂದು ಐಬು ಹುಡುಕುವ ಹುಕಿ.ಅವರೆಡೆಗೆ ಅಸೂಯೆ ಅಂತಲ್ಲ,ಆದರೆ ಸಾಧನೆಯೇನು ದೊಡ್ಡ ವಿಷಯವೆ ಅಲ್ಲ ನನಗೆ ಎನ್ನುವ ಅರ್ಥಹೀನ ಅಹಮಿಕೆ. ಆದರೆ ಬದುಕಿಗಿಂತ ಬೇರೆ ಗುರುವಿಲ್ಲ ನೋಡಿ.ಬದುಕು ಬದಲಾಯಿತು.ಪದವಿ ಉದ್ಯೋಗ ಎಂದು ಅಲೆದು ಒಂದು ಹಂತಕ್ಕೆ ಬಂದು ನಿಂತಿತು. ದೈನಂದಿನ ಹರಸಾಹಸಗಳು ಅರ್ಥವಾಗಲಾರಂಭಿಸಿದವು.ಜೀವನದ ಮಜಲುಗಳು ಹೆಚ್ಚು ಹೆಚ್ಚು ಸ್ಪಷ್ಟವಾಗತೊಡಗಿದಂತೆ,ಸಾಧಕರೆಡೆಗಿನ ನನ್ನ ತಿರಸ್ಕಾರದ ಅರ್ಥಹೀನತೆಯೂ ಸ್ಪಷ್ಟವಾಗಲಾರಂಭಿಸಿತ್ತು.ಬದುಕಿನ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಮೀರಿ ನಿಂತು ಗೆಲುವಿನ ಶಿಖರವೇರಿನಿಲ್ಲುವುದರ ಹಿಂದಿರಬಹುದಾದ ಅಗಾಧ ಪರಿಶ್ರಮದ ಕತೆಯನ್ನು ಬದುಕೇ ಅರ್ಥ ಮಾಡಿಸಿತು. ಎಲ್ಲ ಜಂಜಡಗಳನ್ನು ಮೆಟ್ಟಿನಿಂತು ಸಾಧಕರೆನ್ನಿಸಿಕೊಂಡವರ ಸಾಧನೆಯೆಡೆಗೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು.ನನ್ನದೇ ಬದುಕಿನ ಒತ್ತಡಗಳ ಮೂಲಕ ಸಾಧಕರ ಬದುಕಿನ ಜಟಿಲತೆಯ ಪಾಠವನ್ನು ಬದುಕು ಹೇಳಿಕೊಟ್ಟಿತು.ಈಗ ಸಾಧಕರೆಡೆಗೆ ಗೌರವವನ್ನು ಸೂಚಿಸಬೇಕೆಂದೆನೂ ಇಲ್ಲ.ತಾನಾಗಿಯೇ ಒಂದು ಗೌರವ ಮನಸಿನಲ್ಲಿ ಹುಟ್ಟಿಕೊಂಡುಬಿಡುವುದು ಅಭ್ಯಾಸವಾಗಿ ಹೋಗಿದೆ.
ಹೀಗೆ ಆಲೋಚಿಸುವ ಹೊತ್ತಿಗೆ ಅಲ್ಯಾರೋ,',ಏನು ಸರ್ ಕೊಹ್ಲಿ ದೊಡ್ಡ ಹೀರೋ ನಾ.ಈಗ ಬೌಲರುಗಳಲ್ಲಿ ಕ್ವಾಲಿಟಿ ಇಲ್ಲ ,ಅದಕ್ಕೆ ಸೆಂಚುರಿ ಮೇಲೆ ಸೆಂಚುರಿ ಹೊಡಿತಾರೆ 'ಎಂದರು.'ಮೋದಿ ದು ಏನು ದೊಡ್ಡ ಸಾಧನೆ... ?ಸರಿಯಾದ ವಿರೋದ ಪಕ್ಷ ಇಲ್ಲ ಅದಕ್ಕೆ ಗೆಲ್ತಾನೆ.' ಎಂದವರು ಇನ್ಯಾರೋ.ನನ್ನದೇ ವಯಸ್ಸಿನವರಿರಬೇಕು,ತಿಳುವಳಿಕೆ ಹೇಳುವುದು ಕಷ್ಟವೆನ್ನಿಸಿತು.ನಕ್ಕು ಸುಮ್ಮನಾದೆ

No comments:
Post a Comment